
ದೊಡ್ಡಬಳ್ಳಾಪುರ : ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಎಕರೆ ಸರ್ಕಾರಿ ಗೋಮಾಳವಿದೆ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜಾನುವಾರುಗಳ ಮೇವಿನ ತಾಣ, ಹೈನುಗಾರಿಕೆಗೆ ಬೆನ್ನೆಲುಬಾಗಿರುವ ಸರ್ಕಾರಿ ಗೋಮಾಳ ಭೂಗಳ್ಳರ ಪಾಲಾಗುತ್ತಿದೆ ಎಂದು ರೈತರು ಆತಂಕವನ್ನ ವ್ಯಕ್ತಪಡಿಸಿದ್ದಾರೆ.
ಭಕ್ತರಹಳ್ಳಿಯ ಸರ್ವೆ ನಂಬರ್ 27ರ ಸರ್ಕಾರಿ ಗೋಮಾಳದಲ್ಲಿ ಸುಮಾರು 100 ಎಕರೆ ಜಾಗವಿದೆ, ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ರೈತರಿಗೆ ಜಮೀನು ಮಂಜೂರಾಗಿದೆ, ರೈತರಿಗೆ ಪ್ರತ್ಯೇಕವಾಗಿ ಪೋಡಿಯಾಗದ ಹಿನ್ನಲೆ ಜಂಟಿ ಖಾತೆ ಇದೆ. ಇದರಲ್ಲಿನ ಬಲಾಢ್ಯನೊಬ್ಬ ಜಮೀನಿಗೆ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದಾನೆ, ಸರ್ಕಾರಿ ಗೋಮಾಳ ಸೇರಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಇದಕ್ಕೆ ಅಧಿಕಾರಿಗಳ ಬೆಂಬಲವಿದೆ, ರೈತರ ಜಮೀನಿನಲ್ಲೂ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಇದನ್ನ ತಡೆಯಲು ಮುಂದಾದ ರೈತರ ವಿರುದ್ಧ ಪ್ರಕರಣವನ್ನ ದಾಖಲು ಮಾಡಲಾಗಿದೆ ಎಂದು ರೈತರು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲೇಗೌಡನಹಳ್ಳಿಯ ರೈತರಾದ ನಂಜಮ್ಮ ಮಾತನಾಡಿ, ಜಮೀನಿಗೆ ಸಂಬಂಧಪಟ್ಟ ಪಹಣಿ ಮತ್ತು ಮ್ಯೂಟೇಷನ್ ಸೇರಿದಂತೆ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ, ಆದರೂ ನನ್ನ ಜಮೀನಿಗೆ ಬಲವಂತದಿಂದ ಬೇಲಿ ಹಾಕಲು ಮುಂದಾಗಿದ್ದಾರೆ. ತಡೆಯಲು ಹೋದರೆ ನಮ್ಮ ವಿರುದ್ಧ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ, ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ನೋವು ಅಳಲು ತೋಡಿಕೊಂಡರು.
ಶಿರಸ್ತೆದಾರನಪಾಳ್ಯ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ರಾಜಣ್ಣ ಮಾತನಾಡಿ, ದಾಖಲೆಗಳು ಪ್ರಕಾರ ಮತ್ತು ಸರ್ವೆ ನಂಬರ್ ನಲ್ಲಿ ಎಷ್ಟು ಜಮೀನು ಇದೆಯೋ ಆ ಜಾಗಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸಾವಿರಾರು ಜಾನುವಾರುಗಳಿಗೆ ಮೇವಿನ ತಾಣವಾಗಿರುವ ಗೋಮಾಳವನ್ನ ಸೇರಿಸಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ, ಜೊತೆಗೆ ಜಾನುವಾರುಗಳಿಗೆ ನೀರಿನ ಮೂಲವಾಗಿದ್ದ ಗೋಕುಂಟೆಗಳನ್ನ ನೆಲಸಮ ಮಾಡಿ ಒತ್ತುವರಿ ಮಾಡಲಾಗುತ್ತಿದೆ.
ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲೇಗೌಡನಹಳ್ಳಿ, ಶಿರಸ್ತೇದಾರನಪಾಳ್ಯ, ಅವಲಯ್ಯನಪಾಳ್ಯ, ಲಕ್ಕೇನಹಳ್ಳಿ,ಸಿಂಗೇನಹಳ್ಳಿ, ನರಸಾಪುರ ಸೇರಿದಂತೆ ಹತ್ತಾರು ಗ್ರಾಮಗಳ ಜಾನುವಾರುಗಳಿಗೆ ಈ ಗೋಮಾಳವೇ ಆಧಾರ, ಹೈನುಗಾರಿಕೆ ನಂಬಿ ಕೊಂಡು ರೈತರು ಜೀವನ ನಡೆಸುತ್ತಿದ್ದಾರೆ, ಕುರಿ-ಮೇಕೆ ಸಾಕಾಣಿಕೆ ಮಾಡಿ ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ, ರೈತರು ಮತ್ತು ಜಾನುವಾರುಗಳ ಜೀವನಾಧರವಾಗಿರುವ ಗೋಮಾಳ ಬಲಾಢ್ಯರ ಪಾಲುಗುತ್ತಿದೆ, ಇದರಿಂದ ಮುಂದಿನ ದಿನಗಳಲ್ಲಿ ರೈತರ ಜೀವನ ಮಾಡುವುದು ಕಷ್ಟವಾಗಲಿದೆ, ನಮ್ಮ ಮನವಿ ಇಷ್ಟೇ ಬಲಾಢ್ಯರಿಗೆ ಸೇರಿದ ಜಾಗ ಮತ್ತು ರೈತರಿಗೆ ಮಂಜೂರು ಆಗಿರುವ ಜಾಗವನ್ನ ಹೊರತು ಪಡಿಸಿ ಇನ್ನುಳಿದ ಸರ್ಕಾರಿ ಗೋಮಾಳವನ್ನ ಸರ್ಕಾರ ವಶಕ್ಕೆ ಪಡೆಯ ಬೇಕೆಂದು ಆಗ್ರಹಿಸಿದರು.
ಸ್ಥಳೀಯ ರೈತ ಮಾರುತಿ ಮಾತನಾಡಿ, ಯಾವುದೋ ಜಮೀನಿಗೆ ಯಾವುದೋ ಸರ್ವೇ ನಂಬರ್ ತೋರಿಸಿ ನಮ್ಮದೇ ಜಾಗ ಎನ್ನುತ್ತಾರೆ, ಪ್ರಶ್ನೆ ಮಾಡಲು ಹೋದವರ ಮೇಲೆ ಕೇಸ್ ಹಾಕಿಸುತ್ತಾರೆ. ಬಡ ರೈತರ ಪರ ಇರಬೇಕಾದ ಅಧಿಕಾರಿಗಳು ಬಲಾಢ್ಯರ ಪರವಾಗಿ ಕೆಲಸ ಮಾಡುತ್ತಿದ್ದಾರೆ, ನೂರಾರು ಎಕರೆ ಇದ್ದ ಸರ್ಕಾರಿ ಗೋಮಾಳ ಮತ್ತು ಗೋಕುಂಟೆಗಳು ನೋಡು ನೋಡುತ್ತಿದಂತೆ ಕಣ್ಮರೇಯಾಗುತ್ತಿವೆ, ಒತ್ತುವರಿ ಮಾಡಿಕೊಂಡ ಗೋಮಾಳಕ್ಕೆ ಸುಳ್ಳು ದಾಖಲೆಗಳನ್ನ ಸೃಷ್ಠಿಸಿ ಕೋಟಿ ಕೋಟಿ ಬೆಲೆ ಮಾರಾಟ ಮಾಡುತ್ತಾರೆ. ನೂರಾರು ವರ್ಷಗಳಿಂದ ಇಲ್ಲೇ ಜೀವನ ಮಾಡುತ್ತಿರುವ ರೈತರಿಗೆ ಒಂದಡಿ ಜಾಗ ಇಲ್ಲದಂತೆ ಮಾಡುತ್ತಾರೆ, ಜಾನುವಾರುಗಳು ಮೇಯುವ ಜಾಗವನ್ನ ರೆಸಾರ್ಟ್ ಗಳನ್ನಾಗಿ ಮಾಡುತ್ತಾರೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಗೋಮಾಳ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಬೇಕು , ಹೈನುಗಾರಿಕೆ ಉಳಿಸುವಲ್ಲಿ ಮುಂದಾಗಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ರೈತರಾದ ರವಿ,ಆನಂದ್, ನಾಗರಾಜು, ಮಾರುತಿ, ರಾಜಣ್ಣ, ಜಯಮ್ಮ ಸೇರಿದಂತೆ ಹಲವರು ಹಾಜರಿದ್ದರು.