
ದೊಡ್ಡಬಳ್ಳಾಪುರ : ಭಾರತದ ಪ್ರತಿ ಪ್ರಜೆಗೂ ಸಮಾನ ಹಕ್ಕು ಹಾಗೂ ಘನತೆಯ ಜೀವನವನ್ನು ರೂಪಿಸುವ ನಿಟ್ಟಿನಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದ ಅಡಿಯಲ್ಲಿ ನೂರಾರು ಯೋಜನೆಗಳನ್ನು ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಸತತ 11 ವರ್ಷಗಳಿಂದ ನರೇಂದ್ರ ಮೋದಿಜಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 11 ವರ್ಷಗಳಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವು ದಶಕಗಳ ಜಡತ್ವ ಮುರಿದು, ದಿಟ್ಟ ನಿರ್ಧಾರಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಭದ್ರ ಬುನಾದಿ ಹಾಕಿದೆ. ಒಂದು ಕಡೆ GST, ನೋಟು ಅಮಾನೀಕರಣದಂತಹ ಆರ್ಥಿಕ ಸುಧಾರಣೆಗಳು, ಮತ್ತೊಂದೆಡೆ ಉರಿ-ಬಾಲಾಕೋಟ್ ನಂತಹ ಸರ್ಜಿಕಲ್ ಸ್ಟೈಸ್ ಮತ್ತು ಆಪರೇಷನ್ ಸಿಂಧೂರ್‌ಗಳಿಂದ ರಾಷ್ಟ್ರದ ಭದ್ರತೆಗೆ ಬಲ ನೀಡಲಾಗಿದೆ. ಹಾಗೆಯೇ, ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲಾಗಿದೆ ಹಾಗೂ ಅಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಮಿಸಿ ಭಾರತೀಯರ ಶತಮಾನಗಳ ಕನಸನ್ನು ನನಸು ಮಾಡಿದ್ದು ಐತಿಹಾಸಿಕ ಸಾಧನೆಗಳಾಗಿವೆ. ಎಂದರು.
ಇಂದು, ನಾವು ಜಲ ಜೀವನ್ ಮಿಷನ್‌ನ ಹರ್ ಘರ್ ಜಲ್ ಯೋಜನೆಯಡಿ ಕುಡಿಯುವ ನೀರು, ಹರ್ ಘರ್ ಬಿಜಲಿ ಯೋಜನೆಯಡಿ ವಿದ್ಯುತ್ ಸಂಪರ್ಕ, ಉತ್ತಮ ಆರೋಗ್ಯ ಸೇವೆಗಳು, ಸ್ವಚ್ಛ ಭಾರತ ಯೋಜನೆಯಡಿ ಸ್ವಚ್ಛ ಶೌಚಾಲಯಗಳು, ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆದುಕೊಳ್ಳುತ್ತಿದ್ದೇವೆ. ಗುಣಮಟ್ಟದ ಶಿಕ್ಷಣ ಮತ್ತು ಸೂರು ಇಲ್ಲದವರಿಗೆ ವಸತಿ ಸೌಲಭ್ಯಗಳಂತಹ ಅಗತ್ಯ ಸೌಕರ್ಯಗಳನ್ನು ಪ್ರತಿಯೊಬ್ಬ ಭಾರತೀಯನಿಗೆ ತಲುಪಿಸಿದೆ ಇದು ಕೇವಲ ಒಂದು ಕನಸಾಗಿ ಉಳಿದಿಲ್ಲ, ಇದು ನಮ್ಮ ಮೋದಿ ಸರ್ಕಾರದ ಬದ್ಧತೆಯಾಗಿದೆ ಎಂದರು.
11 ವರ್ಷಗಳ ಸಾಧನೆಯನ್ನು ಪ್ರತಿ ಮನೆ ಮನೆಗೆ ತಲುಪಿಸುತ್ತೇವೆ
ಈ ಹಿಂದೆ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ರವರು ದೇಶದ ಬಡಜನರ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ರೂಪಿಸಿದ್ದರು ಆದರೆ ಸೂಕ್ತ ಪ್ರಚಾರದ ಕೊರತೆ ಕಾರಣ ಜನತೆಗೆ ಬಿಜೆಪಿ ಪಕ್ಷದ ಶ್ರಮ ದೂರ ದೃಷ್ಟಿ ಅರಿವಾಗಲಿಲ್ಲ ಹಾಗಾಗಿ ಅಧಿಕಾರಕ್ಕೆ ಬರಲು ಸಾಕಷ್ಟು ಸಮಯ ಪಡೆಯಿತು. ಆದರೆ ಈ ಬಾರಿ ಹಾಗೆ ಆಗುವುದಿಲ್ಲ ದೇಶದ ಪ್ರತಿ ಮನೆಮನೆಗೂ ನಮ್ಮ ಬಿಜೆಪಿ ಕಾರ್ಯಕರ್ತರು ನರೇಂದ್ರ ಮೋದಿಜಿ ಅವರ ವಿಶೇಷ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ , ಅಲ್ಲದೆ ಮೋದಿಜಿ ನೇತೃತ್ವದ ಬಿಜೆಪಿ ಸರ್ಕಾರದ ಶಕ್ತಿಯನ್ನು ಸಾಮಾನ್ಯ ಜನತೆಗೆ ತಿಳಿಸಲಿದ್ದಾರೆ ಎಂದರು.
ಜಿಲ್ಲಾ ವಕ್ತರರಾದ ಪುಷ್ಪ ಶಿವಶಂಕರ್ ಮಾತನಾಡಿ ಮಹಿಳೆಯರ ಶಕ್ತಿಕರಣವೇ ಭಾರತದ ಶಕ್ತಿಕರಣ ಎಂಬ ಉದ್ದೇಶದಿಂದ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಉಜ್ವಲ ಯೋಜನೆ ಮುಖಾಂತರ ರಾಜ್ಯದ 37.5 ಲಕ್ಷ ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ನೀಡಲಾಗಿದೆ. ಮುದ್ರಾ ಯೋಜನೆ ಮೂಲಕ ರಾಜ್ಯದಲ್ಲಿ ಮಹಿಳೆಯರಿಗೆ ನೀಡಲಾದ 4.14 ಕೋಟಿ ಮುದ್ರಾ ಸಾಲಗಳಲ್ಲಿ ಶೇ. 69 ರಷ್ಟು ಮಹಿಳೆಯರೇ ಪಡೆದಿದ್ದಾರೆ. ಹೆಣ್ಣು ಮಕ್ಕಳ ಉಜ್ವಲ ಭವಿಷ್ಯ ಮತ್ತು ಆರ್ಥಿಕ ಭದ್ರತೆಗಾಗಿ ಜಾರಿಗೆ ತಂದಿರುವ ಸುಕನ್ಯಾ ಸಮೃದ್ಧಿ ಯೋಜನೆಯಡಿ, ಕರ್ನಾಟಕ ಒಂದರಲ್ಲೇ 27.6 ಲಕ್ಷ ಖಾತೆಗಳನ್ನು ತೆರೆಯಲಾಗಿದ ಅಲ್ಲದೇ ರಾಜಕೀಯ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಮನ್ನಣೆ ಕಲ್ಪಿಸುತ್ತಿದ್ದು ಮಹಿಳೆಯರಿಗೆ ಶಾಸಕಾಂಗದಲ್ಲಿ 33% ಮೀಸಲಾತಿ ನೀಡುವ ಐತಿಹಾಸಿಕ ನಾರಿ ಶಕ್ತಿ ವಂದನ್ ಅಧಿನಿಯಮವನ್ನು ಜಾರಿಗೆ ತರಲಾಗಿದೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಶಾಶ್ವತ ಆಯೋಗವನ್ನು (Permanent Commission) ಸ್ಥಾಪಿಸುವ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸಮಾನ ಅವಕಾಶ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಹಾಗೂ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರು ಹಾಜರಿದ್ದರು