ಹಿರಿಯೂರು : ತನ್ನ ಮದುವೆಯ ಸಂಭ್ರಮಾಚರಣೆ ಮಾಡಲು ಇಂಜಿನಿಯರಿಂಗ್ ದಂಪತಿ ನೇರವಾಗಿ ರೈತರಿಗೆ ಹಣ್ಣಿನ ಹಾಗೂ ಹೂ ಗಿಡಗಳನ್ನು ನೀಡುವ ಮೂಲಕ ವಿಶೇಷ ಪರಿಸರ ಜಾಗೃತಿ ಮೂಡಿಸಿದ್ದಾರೆ.
ಈ ದೃಶ್ಯ ಕಂಡು ಬಂದಿದ್ದು ಹಿರಿಯೂರಿನ ಕಳವೆಬಾವಿ ನಿವಾಸಿ ಶಿವಣ್ಣ ಹಾಗೂ ರಾಧಾ ದಂಪತಿಯ ಪುತ್ರನ ಮದುವೆಯಲ್ಲಿ ಸಮಾರಂಭಕ್ಕೆ ಬಂದವರಿಗೆ ಫಲ, ತಾಂಬೂಲ ನೀಡುವುದು ಸಂಪ್ರದಾಯ. ಆದರೆ, ಪರಿಸರ ಪ್ರೇಮದ ಬಗ್ಗೆ ಜಾಗೃತಿ ಮೂಡಿಸಲು ಸಸಿಗಳನ್ನು ನೀಡುವ ಮೂಲಕ ಪರಿಸರ ಜಾಗೃತಿ ವಿಶೇಷತೆಗೆ ನಾಂದಿ ಹಾಡಲಾಯಿತು.
ಮದುವೆ ಸವಿ ನೆನಪಿಗಾಗಿ ಪರಿಸರ ಜಾಗೃತಿ ಮಾಡುತ್ತಿದ್ದು ನಮ್ಮಿಂದ ನಿಸರ್ಗ ಉಳಿಯುವಂತಾಗಲಿ ಹಾಗೂ ಪ್ರತೀ ಶುಭ ಸಮಾರಂಭಗಳಲ್ಲಿ ಈ ರೀತಿ ಪ್ರಕೃತಿ ಅರಿವಿನ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಲಿ ನಡೆಯಲಿ ಎಂದು ಪರಿಸರ ಪ್ರೇಮಿ ಹಾರೈಸಿದರು.
“ಮದುವೆ ಸಮಾರಂಭಕ್ಕೂ ಗಿಡಗಳಿಗೂ ಸಂಬಂಧ ಇದೆ. ಅಷ್ಟೇ ಅಲ್ಲ ಯಾವುದೇ ಸಮಾರಂಭ ಮಾಡಿದರೂ ಅದರಲ್ಲೊಂದು ಅರ್ಥಪೂರ್ಣ ಆಚರಣೆ ಇರಬೇಕು” ಅಂತಾರೆ ಪಟ್ಟಣದ ಪರಿಸರ ಪ್ರೇಮಿ ಸಿ.ಎನ್.ಅಶೋಕ್.
ತಮ್ಮ ಮಗನ ಮದುವೆ ಸಮಾರಂಭಕ್ಕೆ ಪರಿಸರ ಪೂರಕ ವಾತಾವರಣ ನಿರ್ಮಾಣ ಮಾಡಿದ್ದ ಶಿವಣ್ಣ ಮದುವೆ ಸಮಾರಂಭದ ಸವಿ ನೆನಪಿಗಾಗಿ ರೈತರಿಗೆ ಹಣ್ಣಿನ ಗಿಡಗಳನ್ನು ನೀಡುವ ಮೂಲಕ `ಪರಿಸರ ಉಳಿಸಿ’ ಎಂಬ ಪ್ರಾಯೋಗಿಕ ಪಾಠ ಮಾಡಿದರು. ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವಿತದ ಅವಧಿಯಲ್ಲಿ ಕನಿಷ್ಠ ೫೦ ಮರಗಳನ್ನು ನಾಶಪಡಿಸುತ್ತಾನೆ. ಅಂದರೆ, ಅಷ್ಟು ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವ ಕೆಲಸಗಳನ್ನು ಮಾಡುತ್ತಾನೆ. ಆದರೆ, ಅದಕ್ಕೆ ಪರ್ಯಾಯವಾಗಿ ಗಿಡಗಳನ್ನು ನೆಡದಿದ್ದರೆ ಪರಿಸರ ನಾಶದಿಂದ ನಮ್ಮ ಜೀವನಕ್ಕೇ ಕುತ್ತು ತಂದುಕೊಳ್ಳಬಹುದಾದ ಅನಾಹುತಗಳನ್ನು ಅನಿವಾರ್ಯವಾಗಿ ಎದುರಿಸಬೇಕಾಗುತ್ತದೆ. ಒಬ್ಬೊಬ್ಬರೂ ಕಡಿಮೆ ಎಂದರೆ ೧೦ ಗಿಡಗಳನ್ನಾದರೂ ನೆಟ್ಟು ಬೆಳೆಸಿದರೆ ಅದರಿಂದ ಉತ್ತಮ ಪರಿಸರ ನಿರ್ಮಾಣ ಮಾಡುವ ಎಲ್ಲ ಅವಕಾಶಗಳನ್ನೂ ಸೃಷ್ಟಿಸಿದಂತಾಗುತ್ತದೆ ಎಂಬುದು ಅವರ ಆಶಯ.

ತಮ್ಮ ಮಗ ಇಂಜಿನಿಯರ್ ಉದ್ಯೋಗಿ ಸಚಿನ್ ಹಾಗೂ ಸೊಸೆ ವಿನುತಾ ಇಬ್ಬರೂ ನಿರ್ಧಾರ ಮಾಡಿ ಮದುವೆ ಸಮಾರಂಭ ವಿಶೇಷವಾಗಿ ಏನಾದರೂ ಮಾಡೋಣ ಎಂದು ಪರಿಸರ ಕಾಳಜಿ ಪ್ರೀತಿ ತೋರಿದ್ದಾರೆ ಎನ್ನುತ್ತಾರೆ ಶಿವಣ್ಣ.
ನಾವು ವಾಸಿಸುವ ಪರಿಸರದಲ್ಲಿ ಕನಿಷ್ಠ ಶೇ.೧೩ ರಷ್ಟಾದರೂ ಅರಣ್ಯ ಪ್ರದೇಶ ಇರಬೇಕೆಂಬ ನಿಯಮವಿದ್ದರೂ ಈ ಪ್ರಮಾಣವನ್ನು ಕಾಯ್ದುಕೊಳ್ಳುವಲ್ಲಿ ನಾವು ವಿಫಲರಾಗುತ್ತಿರುವುದು ದುರದೃಷ್ಟಕರ. ಸಮಯದ ಹಿಂದೆ ಓಡುತ್ತಿರುವ ಇಂದಿನ ಕಾಲದಲ್ಲಿ ಯಾವುದಕ್ಕೂ ಸಮಯವಿಲ್ಲ ಎಂದು ಹೇಳುವ ಮಂದಿ ಏನನ್ನೂ ಮಾಡಲು ಸಾಧ್ಯವಿಲ್ಲವೆಂಬ ಅಂಶ ಗಮನಾರ್ಹವಾಗಿದ್ದು ಇದೇ ಮಾದರಿಯನ್ನು ನಾವೂ ನಮ್ಮ ಜೀವನದಲ್ಲಿ ಅನುಸರಿಸಿದರೆ ಅದಕ್ಕಿಂತ ಮತ್ತೊಂದು ಸಮಾಜಸೇವೆ ಇಲ್ಲ ಎನ್ನಬಹುದಾಗಿದೆ.
