
ದೊಡ್ಡಬಳ್ಳಾಪುರ: ಈ ಹಿಂದೆ ಸ್ಥಳೀಯವಾಗಿ ಹಾಕಲಾಗಿದ್ದ ಬ್ಯಾನರ್ ಹರಿದು ಕಿಡಿಗೇಡಿಗಳು ಪುಂಡಾಟ ಮೆರೆದಿದ್ದರು. ಈ ಹಿನ್ನಲೆ ಪೊಲೀಸ್ ಇಲಾಖೆ ವತಿಯಿಂದ ಸ್ಥಳೀಯವಾಗಿ ಶಾಂತಿ ಸಭೆ ಆಯೋಜನೆ ಮಾಡಲಾಗಿದ್ದು. ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಮುಖಂಡರು ಇನ್ನು ಮುಂದೆ ಸೌಹಾರ್ದಯುತವಾಗಿ ಜೀವನ ಸಾಗಿಸಲು ನಿರ್ಧರಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ತಿಳಿಸಿದರು
ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ನೆರಳೇಘಟ್ಟ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶಾಂತಿ ಸಭೆ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ನಾಮಫಲಕವನ್ನು ಪೊಲೀಸ್ ಅಧಿಕಾರಿ ಸಾಧಿಕ್ ಪಾಷ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು, ಹಲವು ಪದಾಧಿಕಾರಿಗಳು ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಸಾಧಿಕ್ ಪಾಷಾ ಮಾತನಾಡಿ ಸ್ಥಳೀಯವಾಗಿ ದಲಿತರ ಕುಂದು ಕೊರತೆ ಆಲಿಸುವ ಸಲುವಾಗಿ ಪೊಲೀಸ್ ಇಲಾಖೆ ವತಿಯಿಂದ ತಾಲ್ಲೂಕಿನ ನೇರಳೆಘಟ್ಟ ಗ್ರಾಮದಲ್ಲಿ ಶಾಂತಿ ಸೌಹಾರ್ದ ಸಭೆಯನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ಮುಖಂಡರಿಂದ ಉತ್ತಮ ಸ್ಪಂದನ ದೊರೆತಿದ್ದು. ಈ ಸಭೆಯು ಯಶಸ್ವಿಯಾಗಿದೆ. ಸೌಹಾರ್ದಯುತವಾಗಿ ಬಾಳುವ ಭರವಸೆಯನ್ನು ಸ್ಥಳೀಯ ಮುಖಂಡರು ನೀಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ಪೊಲೀಸ್ ಇಲಾಖೆ ಸದಾ ಬೆಂಬಲವಾಗಿರುತ್ತದೆ ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕದ ಅಧ್ಯಕ್ಷ ರಾಮು ಮಾತನಾಡಿ ಈ ಹಿಂದೆ ಪ್ರೊಫೆಸರ್ ಬಿ ಕೃಷ್ಣಪ್ಪ ರವರ 50ನೇ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನೇರಳೆ ಘಟ್ಟ ಗ್ರಾಮದಲ್ಲಿ ಬ್ಯಾನರ್ ಹಾಕಿದ್ದು ಕಿಡಿಗೇಡಿಗಳು ಬ್ಯಾನರ್ ಹರಿದು ಪುಂಡಾಟಿಕೆ ಮೆರೆದಿದ್ದರು. ಈ ಕುರಿತು ಕಸಬಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಸ್ಥಳೀಯ ಪೊಲೀಸ್ ಅಧಿಕಾರಿಗಳಾದ ಸಾಧಿಕ್ ಪಾಷಾ ರವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೆರಳೇಘಟ್ಟ ಗ್ರಾಮದಲ್ಲಿ ಸರ್ವ ಜನಾಂಗದ ಶಾಂತಿ ಹಾಗೂ ಸೌಹಾರ್ದ ಸಭೆ ಹಾಗೂ ದಲಿತ ಕುಂದು ಕೊರತೆ ಸಭೆಯನ್ನು ನೆಡೆಸಲು ಮುಂದಾಗಿದ್ದು .ಸಭೆಯು ಯಶಸ್ವಿಯಾಗಿದೆ . ಇದೇ ಸಂದರ್ಭದಲ್ಲಿ ನಮ್ಮ ಸಂಘಟನೆಯ ನಾಮಫಲಕವನ್ನು ಅನಾವರಣಗೊಳಿಸಿರುವುದು ಮತ್ತಷ್ಟು ಸಂತೋಷ ತಂದಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಜಿಲ್ಲಾ ಘಟಕದ ಸಂಚಾಲಕರಾದ ಎಂ. ಪಿ ಗಂಗಾಧರ್ ಮಾತನಾಡಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಕೇವಲ ದಲಿತರಿಗಷ್ಟೇ ಅಲ್ಲದೆ ಸರ್ವರಿಗೂ ಅನುಕೂಲ ಮಾಡುವ ಸಂಘಟನೆಯಾಗಿದ್ದು . ಕರ್ನಾಟಕ ರಾಜ್ಯದ ಪ್ರಬಲ ಸಂಘಟನೆಯಾಗಿದೆ. ಸ್ಥಳೀಯವಾಗಿ ರಾಮು ರವರ ನೇತೃತ್ವದಲ್ಲಿ ಸಂಘಟನೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು. ಮುಂದೆ ಸಾರ್ವಜನಿಕರಿಗೆ ಅನುಕೂಲವಾಗುವ ಹಲವು ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಹಾರೈಸಿದರು .
ಜಿಲ್ಲಾ ಸಂಚಾಲಕರಾದ ದೊಡ್ಡಯ್ಯ ಲಿಂಗಾಪುರ ಮಾತನಾಡಿ ಈ ಹಿಂದೆ ಕೆಲ ಕಿಡಿಗೇಡಿಗಳು ನಮ್ಮ ಸಂಘಟನೆಯ ಬ್ಯಾನರ್ ಹರಿದು ವಿಕೃತ ಮೆರೆದಿದ್ದರು. ಸ್ಥಳೀಯ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಇಂದು ಅದೇ ಜಾಗದಲ್ಲಿ ನಮ್ಮ ಸಂಘಟನೆಯ ನಾಮಫಲಕವನ್ನು ಅಧಿಕೃತವಾಗಿ ಅನಾವರಣ ಮಾಡಲಾಗಿದೆ. ಪೊಲೀಸ್ ಇಲಾಖೆಯ ಸಹಕಾರ ಶ್ಲಾಘನೀಯ. ತಾಲೂಕಿನ ರಾಮು ನೇತೃತ್ವದ ತಂಡ ದಲಿತಪರ ಧ್ವನಿಯಾಗಿ ಶ್ರಮಿಸಲಿದೆ ಎಂದು ಅಭಿಪ್ರಾಯ ಪಟ್ಟರು .
ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ ಮಾತನಾಡಿ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನ ಎಲ್ಲಾ ಭಾಗಗಳಿಂದ ಕಾರ್ಯಕರ್ತರು ಭಾಗವಹಿಸಿದ್ದು. ಸಂಘಟನೆಯ ಬಲ ಹೆಚ್ಚಿದೆ. ದಲಿತರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮೆಲ್ಲರ ಮೊದಲ ಆದ್ಯತೆ. ಪ್ರೊಫೆಸರ್ ಬಿ ಕೃಷ್ಣಪ್ಪ ಅವರ ಆಶಯದಂತೆ ಸಂಘಟನೆ ಮುನ್ನಡೆಸಲಾಗುವುದು ಎಂದು ತಿಳಿಸಿದರು .
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ, ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮಾಡೇಶ್ವರ, ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ರಮೇಶ್ ಹಾಲೇನಳ್ಳಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ,ಘಟಕದ ಸಂಘಟನಾ ಸಂಚಾಲಕರಾದ ಹನುಮಯ್ಯ, ಕಾರ್ಯದರ್ಶಿ ರಮೇಶ್ ಜಾಲಗೆರೆ, ಎನ್.ಎ.ನಾಗರಾಜ್ ನಾಗದೇನಹಳ್ಳಿ,.ಕುಮಾರ್ ತೂಬುಕುಂಟೆ, ಚೌಡಮೂರ್ತಿ ಕಸಘಟ್ಟ, ನರಸಿಂಹಯ್ಯ ಬೊಮ್ಮನಹಳ್ಳಿ, ಹನುಮಂತರಾಜು ಲಿಂಗಾಪುರ, ರಾಮಚಂದ್ರಪ್ಪ ಸಾಸಲು, ವೆಂಕಟೇಶ್ ಸೂಲುಕುಂಟೆ ಇದ್ದರು. ಹಾಗೂ ಸಂಘಟನೆಯ ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು