
75 ನೇ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಆಯೋಜನೆ ಮಾಡಿದ್ದು ಸಾಂಕೇತಿಕವಾಗಿ ಸಂವಿಧಾನ ರಥದ ಆಯೋಜನೆ ಮಾಡಿದ್ದು. ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಗೆ ಸಂವಿಧಾನ ಜಾಗೃತಿ ಜಾಥಾ ವಾಹನ ಬಂದಿದ್ದು ಸ್ಥಳೀಯರು ಕುಂಭ ಸಹಿತ, ವಾದ್ಯ ,ನೃತ್ಯ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ಅದ್ಧೂರಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ಜೈ ಭೀಮ್ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಸಂವಿಧಾನ ಜಾಗೃತಿ ಕುರಿತು ಪಂಚಾಯಿತಿ ಮಟ್ಟದಲ್ಲಿ ಅಷ್ಟೇ ಅಲ್ಲದೆ ಪ್ರತಿ ಮನೆಮನೆಗೂ ತಲುಪುವಂತಾಗಬೇಕು. ಈ ರೀತಿಯ ವಿಶೇಷ ಕಾರ್ಯಕ್ರಮ ರೂಪಿಸಿದ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹನುಮಯ್ಯ ತಿಳಿಸಿದರು
ಸ್ಥಳೀಯರಾದ ಗಿರೀಶ್ ಮಾತನಾಡಿ ಈ ರೀತಿಯ ಕಾರ್ಯಕ್ರಮವನ್ನು ಆಚರಿಸುತ್ತಿರುವುದು ನಮ್ಮೆಲ್ಲರ ಪುಣ್ಯವೇ ಸರಿ ಕಾರಣ ನಮ್ಮ ಕಾಲಘಟ್ಟದಲ್ಲಿ ಸಂವಿಧಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರದ ವತಿಯಿಂದ ವಾಹನವೊಂದು ಪ್ರತಿ ಪಂಚಾಯಿತಿಗೆ ತಲುಪಿ ಸಂವಿಧಾನ ಹಾಗೂ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಅರಿವು ಮೂಡಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಅವರು ಸಮುದಾಯಗಳನ್ನು ಮೀರಿದ ಶಕ್ತಿಯಾಗಿದ್ದಾರೆ ಯುವಕರಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
Ad
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂಪಿ ಗಂಗಾಧರ್ ಮಾತನಾಡಿ ಇಂದು ಅತ್ಯಂತ ಸಂತೋಷದ ದಿನವಾಗಿದೆ . ಕಾರಣ ಸರ್ವ ಸಮುದಾಯದವರು ಒಟ್ಟಾಗಿ ಸೇರಿ ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದೇವೆ. ನಮ್ಮ ಸಂಘಟನೆಯ ವತಿಯಿಂದ ಪ್ರೊಫೆಸರ್ ಬಿ.ಕೃಷ್ಣಪ್ಪ ರವರ ಆಶಯದಂತೆ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತೇವೆ. ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಬದಲಾವಣೆ ಮಾಡಲು ಕೆಲವು ಕಿಡಿಗೇಡಿಗಳು ಹೊರಟಿದ್ದಾರೆ ಈ ಕುರಿತು ದಲಿತ ಸಮುದಾಯ ಸುಮ್ಮನೆ ಕೂರುವ ಮಾತಿಲ್ಲ. ಸಂವಿಧಾನ ಬದಲಿಸುವ ಮಾತನ್ನು ನಾವು ಎಂದಿಗೂ ಒಪ್ಪುವುದಿಲ್ಲ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಸ್ಥಳೀಯರಾದ ರಾಮು , ದೊಡ್ಡಯ್ಯ, ಎಂ . ಕೆ.ನರೇಂದ್ರಮೂರ್ತಿ ,ಹನುಮಯ್ಯ ,ಹನುಮಂತಯ್ಯ, ಆನಂದ್, ಕೆಂಪರಾಜು, ನರಸಿಂಹಮೂರ್ತಿ , ಮುನಿರಾಜು ಸೇರಿದಂತೆ ಹಲವು ದಲಿತ ಮುಖಂಡರು ಪ್ರಗತಿಪರ ಚಿಂತಕರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು