
ಯಲಹಂಕ : ಕೇಂದ್ರದ ಅಡಿಯಲ್ಲಿ ಶ್ರಮಿಸುವ ಯೋಧರು ಇಂದು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸುವ ಪರಿಸ್ಥಿತಿ ಎದುರಾಗಿದೆ ಇದು ಕೇಂದ್ರ ಸರ್ಕಾರದ ವೈಫಲ್ಯ ,ದೇಶ ಕಾಯುವ ಯೋಧ ತನ್ನ ಸೌಲಭ್ಯಗಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ . ಸದಾ ದೇಶ ಸೇವೆಯಲ್ಲಿ ಮುಳುಗಿರುವ ಯೋಧ ನಿವೃತ್ತಿ ನಂತರ ತನ್ನ ಸೌಲಭ್ಯಗಳನ್ನು ಬೇಡಿ ಪಡೆಯುವ ಈ ಪರಿಸ್ಥಿತಿ ಬದಲಾಗಬೇಕಿದೆ. ಬೆಂಗಳೂರು ನಗರ ಅಭಿವೃದ್ಧಿ ಜವಾಬ್ದಾರಿ ಹೊತ್ತಿರುವ ನಾನು ನಗರ ಅಭಿವೃದ್ಧಿ ಇಲಾಖೆಯಲ್ಲಿ ಯೋಧರಿಗೆ ನೀಡಬಹುದಾದ ಹುದ್ದೆಗಳನ್ನು ಕುರಿತು ಚರ್ಚಿಸಿ ಉತ್ತಮ ತೀರ್ಮಾನ ಕೈಗೊಳ್ಳುತ್ತೇನೆ ಹಾಗೂ ಮಾಜಿ ಯೋಧರ ಮನವಿಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಶೀಘ್ರವಾಗಿ ಬಗೆಹರಿಸಲಾಗುವುದು ಎಂದು ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು
ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 2019ನೇ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ ವೀರ ಯೋಧರ ಹಾಗೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲಾ ಹುತಾತ್ಮ ಯೋಧರಿಗೂ 5ನೇ ವಾರ್ಷಿಕ ಸ್ಮರಣಾಂಜಲಿ ಕಾರ್ಯಕ್ರಮವನ್ನು ಗ್ರೂಪ್ ಸೆಂಟರ್, ಯಲಹಂಕದಲ್ಲಿ ಆಯೋಜನೆ ಮಾಡಲಾಗಿತ್ತು . ಕಾರ್ಯಕ್ರಮವನ್ನು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು .
ನಂತರ ಮಾತನಾಡಿದ ಅವರು ದೇಶಕ್ಕೆ ರೈತ, ಕೃಷಿಕ,ಕಾರ್ಮಿಕ, ಯೋಧ ನಾಲ್ಕು ಪ್ರಮುಖ ಆಧಾರ ಸ್ಥಭಗಳಂತೆ , ಅರೇಸೇನಾ ಪಡೆ ಯೋಧರ ಸಮಸ್ಯೆ ಕುರಿತು ಸುಧೀರ್ಘವಾಗಿ ಚರ್ಚಿಸಿ ಉತ್ತಮ ನಿರ್ಧಾರ ಕೈಗೊಳ್ಳಲಾಗುವುದು ,ಸದಾ ಪರರ ಹಿತಕ್ಕಾಗಿ ಶ್ರಮಿಸುವ ಯೋಧರ ನೋವನ್ನು ಶೀಘ್ರವಾಗಿ ಬಗೆಹರಿಸಲಾಗುವುದು ಈ ಹಿಂದೆ ನಮ್ಮ ಸರ್ಕಾರ ನೀಡಿದ ಪ್ರತ್ಯೇಕ ಸೈನಿಕ್ ಬೋರ್ಡನ್ನು ನಂತರ ಬಂದ ಸರ್ಕಾರ ತೆರವುಗೊಳಿಸಿದೆ ಎಂದು ತಿಳಿಸಿದ್ದಾರೆ ಈ ಕುರಿತು ಚರ್ಚಿಸಿ ಮಾಜಿ ಸೈನಿಕರ ಬೋರ್ಡ್ ಅನ್ನು ಮರುಸ್ಥಾಪನೆ ಮಾಡುವ ಕುರಿತು ಚಿಂತಿಸಲಾಗುವುದು ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷರಾದ ನಿವೃತ್ತ ಐಜಿ ಅರ್ಕೆಷ್ ದೇಶಕ್ಕಾಗಿ 24 ಗಂಟೆಗಳ ಸೇವೆ ಸಲ್ಲಿಸುವ ಅರೇಸೇನಾ ಪಡೆಗಳ ಕುಂದು ಕೊರತೆಗಳು ಸಾಕಷ್ಟಿವೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲು ಹಾಗೂ ದೇಶಕ್ಕಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡ ಅರೆಸೇನಾ ಪಡೆಗಳ ಯೋಧರ ಸ್ಮರಣಾರ್ಥವಾಗಿ ಈ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ . ನಮ್ಮ ಸೇವಾ ಸಮಯದಲ್ಲಿ ಯಾರಿಂದಲೂ ಲಂಚ ಪಡೆದಿಲ್ಲ ಮುಂದೆ ನಮ್ಮ ಹಕ್ಕನ್ನು ಪಡೆಯಲು ಲಂಚ ನೀಡುವ ಅವಶ್ಯಕತೆ ಇಲ್ಲ . ಭೂ ಸೇನೆ ,ವಾಯು ಸೇನೆ ಹಾಗೂ ನೌಕಾ ಸೇನೆಗೆ ಸಿಗುವ ಸೌಲಭ್ಯಗಳು ಅರೆಸೇನಾ ಪಡೆಗಳಿಗೆ ಸಿಗುತ್ತಿಲ್ಲ, ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ, ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಗೆ ಪರದಾಡುವ ಪರಿಸ್ಥಿತಿ ಅರೆಸೇನಾಪಡೆಯ ಯೋಧರಿಗೆ ಎದುರಾಗಿದೆ . ಈ ಕುರಿತು ಸರ್ಕಾರದ ಮಟ್ಟದಲ್ಲಿ ಅರೆಸೇನಾ ಪಡೆಗಳ ಯೋಧರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬೋರ್ಡ್ ವ್ಯವಸ್ಥೆಯಾಗಬೇಕಿದೆ . ಕೇವಲ ಸೌಲಭ್ಯಕ್ಕಾಗಿ ಅಲ್ಲದೆ ದೇಶ ಸೇವೆ ಸಲ್ಲಿಸಿರುವ ಯೋಧರ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸುವಲ್ಲಿ ಸರ್ಕಾರ ಶ್ರಮಿಸಬೇಕಿದೆ . ಸರ್ಕಾರಕ್ಕೆ ಮುಂದೆ ಈ ಮೂಲಕ ನಮ್ಮ ಯೋಧರ ಸಮಸ್ಯೆಗಳನ್ನು ಮಂಡಿಸಲಾಗುತ್ತಿದ್ದು ತ್ವರಿತವಾಗಿ ನಮ್ಮ ಕುಂದು ಕೊರತೆಗಳನ್ನು ಬಗೆಹರಿಸುವಂತೆ ಒತ್ತಾಯಿಸುತ್ತಿವೆ ಎಂದರು .
ಜನರಲ್ ಹೆಚ್.ಆರ್. ಸಿಂಗ್ ಮಾತನಾಡಿ ಪುಲ್ವಾಮ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುವ ಈ ಬೃಹತ್ ಸಮಾವೇಶ ವಿಶೇಷವಾಗಿದ್ದು .ಮಾಜಿ ಯೋಧರ ಹಲವು ಕುಂದು ಕೊರತೆಗಳನ್ನು ಸ್ಥಳೀಯ ಸರ್ಕಾರದ ಪ್ರತಿನಿಧಿಗಳ ಮುಂದೆ ಮಂಡಿಸಲು ಉತ್ತಮ ವೇದಿಕೆಯಾಗಿರುವುದು ಮಾಜಿ ಯೋಧರ ಭಾಗ್ಯವೆಂದರೆ ತಪ್ಪಾಗಲಾರದು .ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅರೇಸೇನಾ ಪಡೆಗಳ ಬೇಡಿಕೆಗಳನ್ನು ಅರಿತು ತ್ವರಿತವಾಗಿ ಈಡೇರಿಸಬೇಕು ಎಂದು ಆಗ್ರಹಿಸಿದರು
ಕಾಂಗ್ರೆಸ್ ವಕ್ತಾರರಾದ ನಿಕೇತ್ ರಾಜ್ ಮೌರ್ಯ ಮಾತನಾಡಿ ಹಲವಾರು ಸಂದರ್ಭಗಳಲ್ಲಿ ದೇಶದ ಗೌರವ ಹಾಗೂ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿರುವ ಅರೆಸೇನಾ ಪಡೆಗಳ ಮಾಜಿ ಯೋಧರು ತಮ್ಮ ಹಕ್ಕಿಗಾಗಿ ಬೀದಿಯಲ್ಲಿ ನಿಂತಿರುವುದು ಶೋಚನೀಯ ಸಂಗತಿ .ಮಾಜಿ ಯೋಧರು ಕೇಳುತ್ತಿರುವುದು ಬಿಕ್ಷೆಯಲ್ಲ ಅವರ ಹಕ್ಕನ್ನು ಕೇಳುತ್ತಿದ್ದಾರೆ . ಈಗಿನ ಸರ್ಕಾರಗಳು ಅರೆಸೇನಾ ಪಡೆಗಳ ಮಾಜಿ ಯೋಧರ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರಗಳ ಆದ್ಯಕರ್ತವ್ಯವಾಗಿದೆ .ದೇಶ ಕಾಯುವ ಯೋಧನಿಗೆ ಯಾವುದೇ ಜಾತಿ,ಧರ್ಮ,ಪಕ್ಷಗಳಿಲ್ಲ. ಯೋಧರ ಸೇವೆ ಬಯಸುವ ಸರ್ಕಾರಗಳಿಗೆ ಯೋಧರ ಕಷ್ಟ ಕೇಳುವ ಕಿವಿ ಇಲ್ಲದಿರುವುದು ವಿಪರ್ಯಾಸವೇ ಸರಿ .ಯೋಧರ ಈ ಮನವಿಯನ್ನು ಸರ್ಕಾರದ ಗಮನಕ್ಕೆ ಖಂಡಿತ ತರಲಾಗುವುದು ಎಂದು ತಿಳಿಸಿದರು .
ಸಿ ಎ ಪಿ ಎಫ್ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸೈನಿಕರಾದ ಅನಂತ ರಾಜಗೋಪಾಲ ಮಾತನಾಡಿ ದೇಶದ ಗಡಿಯನ್ನು ಹಗಲು ರಾತ್ರಿ ಎನ್ನದೆ ಕಾವಲು ಕಾಯುವ ,ದೇಶಕ್ಕೆ ಯಾವುದೇ ಅಪತ್ತು ಎದುರಾದಲ್ಲಿ ಮೊದಲು ನಿಂತು ಸೆಣಸಾಡುವ ಯೋಧ ತನ್ನ ಕರ್ತವ್ಯದಿಂದ ನಿವೃತ್ತಿ ಹೊಂದು ತನ್ನ ತಾಯ್ನಾಡಿಗೆ ಬಂದರೆ ಇಲ್ಲಿ ಅವನು ಒಬ್ಬ ಸೆಕ್ಯೂರಿಟಿ (ಭದ್ರತೆ) ಗಾರ್ಡ್ ಆಗಿ ಸೇವೆ ಸಲ್ಲಿಸುವ ಪರಿಸ್ಥಿತಿ ಇದೆ .ಕೇಂದ್ರ ಹಾಗೂ ರಾಜ್ಯದಿಂದ ಮಾಜಿ ಯೋಧರಿಗೆ ಸಲ್ಲಬೇಕಿರುವ ಸೌಲಭ್ಯಗಳನ್ನು ಪಡೆಯುವಲ್ಲಿ ಹರಸಾಹಸ ಪಡಬೇಕಿದೆ . ಈ ಹಿಂದೆ ಅರೇ ಸೇನಾ ಪಡೆಗಳ ಬೋರ್ಡ್ ಅನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಘೋಷಿಸಿದ್ದರು ಆದರೆ ನಂತರ ಬಂದ ಸರ್ಕಾರ ಸೈನಿಕ್ ಬೋರ್ಡ್ ಅನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದು ಈಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುತ್ತಿದ್ದು ಈ ಬಾರಿ ನಮ್ಮ ಸೈನಿಕರಿಗಾಗಿ ಪ್ರತ್ಯೇಕ ಬೋರ್ಡ್ ಸ್ಥಾಪನೆಯಾಗುವ ಭರವಸೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ವೀರ ಮರಣ ಹೊಂದಿದ ಹುತಾತ್ಮ ಯೋಧರ ಕುಟುಂಬಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅರಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ,ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಹೆಚ್. ಕೃಷ್ಣಪ್ಪ ,ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾದ ಅನಂತ ರಾಜಗೋಪಾಲ, ನರಸಿಂಹಮೂರ್ತಿ ಸೇರಿದಂತೆ ಸಾವಿರಾರು ಮಾಜಿ ಯೋಧರು ಉಪಸ್ಥಿತರಿದ್ದರು .