
ದೊಡ್ಡಬಳ್ಳಾಪುರ ( ವಿಜಯಮಿತ್ರ ) : ಸರ್ಕಾರದ ಆದೇಶದಂತೆ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಪಾಲಿಸುವಂತೆ ಅಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಕನ್ನಡ ನಾಮಫಲಕ ಜಾಗೃತಿ ಅಭಿಯಾನ ನಡೆಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಅಂಗಡಿ, ಆಸ್ಪತ್ರೆ, ಹೋಟೆಲ್ ಸೇರಿದಂತೆ ಹಲವು ವಾಣಿಜ್ಯ ಮಳಿಗೆಗಳಿಗೆ ಭೇಟಿಕೋಟ್ಟು ತಮ್ಮ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಒತ್ತಾಯಿಸಲಾಯಿತು
ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಎ.ನಂಜಪ್ಪ ತಾಲ್ಲೂಕಿನಲ್ಲಿ ಹಲವಾರು ವರ್ಷಗಳಿಂದ ಬೇರೆ ರಾಜ್ಯದ ಹಲವು ಭಾಷೆಯ ಜನರು ಇಲ್ಲಿ ತಮ್ಮ ಜೀವನವನ್ನು ಒಂದಲ್ಲ ಒಂದು ರೀತಿಯ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಟ್ಟಿಕೊಂಡಿದ್ದಾರೆ .
ನಮ್ಮ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಮತ್ತು ಕಟ್ಟಡ ಕಾರ್ಮಿಕ ವೃತ್ತಿಯಲ್ಲಿ ಸಾವಿರಾರು ಜನರು ತೊಡಗಿಸಿಕೊಂಡಿದ್ದಾರೆ ಆದರೆ ಸಕಲ ಸೌಲಭ್ಯಗಳನ್ನು ಪಡೆಯುವ ಅನ್ಯರಿಗೆ ನಮ್ಮ ಭಾಷೆ ಮಾತ್ರ ಬೇಡ.ಇಲ್ಲಿ ಬಂದು ನೆಲೆಸಿರುವ ಬೇರೆ ರಾಜ್ಯದ ಜನ ಇಲ್ಲಿಯ ಭಾಷೆ, ಸಂಸ್ಕೃತಿ, ನೆಲ, ಜಲಕ್ಕೆ ಗೌರವ ಕೊಡುವುದು ಅವರ ಆದ್ಯಕರ್ತವ್ಯ ಎಂಬುದು ತಿಳಿದಿರಲಿ . ಸ್ಥಳೀಯ ರಾಜಕೀಯ ನಾಯಕರಿಗೆ ಭಾಷೆ ಕುರಿತು ಕಾಳಜಿ ಇಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಹೊರಡಿಸಿದ ನಾಮ- ಫಲಕಗಳಲ್ಲಿ ಕನ್ನಡ ಭಾಷೆ ಶೇ 60ರಷ್ಟು ಕಡ್ಡಾಯ ಪಾಲನೆ ಮಾಡದವರ ವಿರುದ್ಧ ನಗರಸಭೆ ಅಧಿಕಾರಿಗಳು ಅಂಗಡಿ ಪರವಾನಗಿ ಅಥವಾ ನವೀಕರಣ ಮಾಡುವಾಗ ಕನ್ನಡ ಕಡ್ಡಾಯದ ನಿಯಮ ತಿಳಿಸಬೇಕು. ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ತರದಾಳ ಶ್ರೀನಿವಾಸ್, ಉಪಾಧ್ಯಕ್ಷ ನಯಾಜ್ ಖಾನ್, ಕಾರ್ಮಿಕ ಘಟಕದಗಂಗರಾಜು, ಸಂಘಟನೆಗಳ ಮುಖಂಡ ಹರಿಕುಮಾರ್, ಪ್ರವೀಣ್ಕುಮಾರ್, ಗೌರಮ್ಮ, ಕುಮುದಾ, ನಂದಿನಿ, ದರ್ಶನ್, ವಿಶ್ವನಾಥ್, ಮಹೇಶಪ್ಪ, ಭವಿಷ್ಯತ್, ಮಂಜುನಾಥ್, ಕೆಂಪೇಗೌಡ, ರಾಜು ಸಣ್ಣಕ್ಕಿ, ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.