
ದೊಡ್ಡಬಳ್ಳಾಪುರ ಏಪ್ರಿಲ್ 19 ( ವಿಜಯಮಿತ್ರ ) : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕರ್ನಾಟಕದಲ್ಲಿ 820 ಕೆರೆಗಳನ್ನು ರೈತರ ಹಾಗೂ ಗ್ರಾಮಸ್ಥರ ಸಹಕಾರದಿಂದ ಹೂಳೆತ್ತಲಾಗಿದೆ ಎಂದು ಯೋಜನಾಧಿಕಾರಿಗಳಾದ ಸುಧಾಭಾಸ್ಕರ್ ನಾಯ್ಕ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ಬೆಲವಂಗಲ ವಲಯದ ರಾಮೇಶ್ವರ ಗ್ರಾಮದಲ್ಲಿ *ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ* ತಾಲ್ಲೂಕು ಹಾಗೂ *ಹಾದ್ರಿಪುರ ಗ್ರಾಮ* ಪಂಚಾಯತಿ ಮತ್ತು *ಕೆರೆ ಅಭಿವೃದ್ಧಿ ಸಮಿತಿ ರಾಮೇಶ್ವರ ಇವರ ಸಂಯುಕ್ತ ಆಶ್ರಯದಲ್ಲಿ ರಾಮೇಶ್ವರ ಗ್ರಾಮದ ಊರ ಮುಂದಿನ ಕೆರೆ* ಕಾಮಗಾರಿ ಮತ್ತು ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ನೆರವೇರಿಸಿದ ಅವರು ಮಾತನಾಡಿ ನಮ್ಮ ಯೋಜನೆಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಬರಗಾಲದ ಹಿನ್ನೆಲೆ ಕೆರೆ ಹೂಳೆತ್ತುವುದರಿಂದ ಊರಿನ ಬೋರ್ವೆಲ್ ರಿಚಾರ್ಜ್ ಆಗುತ್ತದೆ, ದನಕರುಗಳಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ ಆಗಲಿದೆ ಅಂತರ್ಜಲ ಮಟ್ಟ ಹೆಚ್ಚಳ ಆಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಛೇರಿ ಅಭಿಯಂತರರಾದ ಅರುಣ್,ಕೆರೆ ಸಮಿತಿ ಅಧ್ಯಕ್ಷರಾದ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀನಿವಾಸ್, ವಲಯದ ಮೇಲ್ವಿಚಾರಕರಾದ ಸಂತೋಷ್, ತಾಲೂಕು ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ , ಕೆರೆ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರು, ಸೇವಾಪ್ರತಿನಿಧಿ ಸಾಕಮ್ಮ ,ಗ್ರಾಮಸ್ಥರು ಉಪಸ್ಥಿತರಿದ್ದರು.