
ದೊಡ್ಡಬಳ್ಳಾಪುರ ಏಪ್ರಿಲ್ 20 ( ವಿಜಯಮಿತ್ರ ) : ಮುಂಜಾನೆ 5:00 ಸಮಯಕ್ಕೆ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರ ಮೇಲೆ ಅಪರಿಚಿತರು ಮಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ನಗರ ಹೊರಹೊಲಯದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೆಡೆದಿದೆ.
ಜೀನ್ಸ್ ನೆಟ್ ಪ್ರೈವೇಟ್ ಲಿಮಿಟೆಡ್ ( FFI) ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ನರೇಂದ್ರಕುಮಾರ್ ವರ್ಮಾ ಹಲ್ಲೆಗೆ ಒಳಗಾದ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ನಾಲ್ವರು ಅಪರಿಚಿತರು ಕಾರಿನಲ್ಲಿ ಬಂದು ವಿಳಾಸ ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನಿಸಿ ಮೊಬೈಲ್ ಕೊಡುವಂತೆ ಪಿಡಿಸಿದ್ದು ಮೊಬೈಲ್ ನೀಡದ ಹಿನ್ನೆಲೆ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ನರೇಂದ್ರ ಕುಮಾರ್ ವರ್ಮಾ ಆರೋಪಿಸಿದ್ದಾರೆ.
ಬೆಲೆಬಾಳುವ ವಸ್ತುಗಳು ಸಿಗದ ಹಿನ್ನಲೆ ವ್ಯಕ್ತಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಹೋರಾಟಗಾರ ಚಿದಾನಂದ್ ಮಾತನಾಡಿ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶವು ಬಹಳ ಅಭಿವೃದ್ಧಿ ಹೊಂದಿದೆ ಆದರೆ ಮೂಲಭೂತ ಸೌಕರ್ಯದ ವಿಷಯಕ್ಕೆ ಬಂದರೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲ, ಸಿಸಿ ಕ್ಯಾಮೆರಗಳಿಲ್ಲ ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಈ ಪ್ರದೇಶವು ಕನಿಷ್ಠ ಸೌಲಭ್ಯ ಒದಗಿಸಲು ವಿಫಲವಾಗಿದೆ. ಸಾವಿರಾರು ಕಾರ್ಮಿಕರು ಹೊರ ರಾಜ್ಯಗಳಿಂದ ಬಂದು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಕಾರ್ಮಿಕರಿಗೆ ರಕ್ಷಣೆ ಇಲ್ಲದಂತಾಗಿದೆ ಇಂದು ಬೆಳಗ್ಗೆ ಕಾರ್ಮಿಕ ನರೇಂದ್ರ ಕುಮಾರ್ ವರ್ಮ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪುಂಡರ ಎಡೆಮುರಿ ಕಟ್ಟಬೇಕಿದೆ ಎಂದರು.