
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಮರ ಗಿಡಗಳನ್ನು ನೆಟ್ಟು ಪೋಷಿಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಪರಿಸರದ ಬಗ್ಗೆ ನಮ್ಮಲ್ಲರ ಹಿಂದಿನ ಕಾಳಜಿ ಮುಂದಿನ ಪೀಳಿಗೆಗೆ ವರವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ. ಟ್ರಸ್ಟ್ ( ರಿ )ನ ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು.
” *ವಿಶ್ವ ಪರಿಸರ ದಿನಾಚರಣೆ* ” ಯ ಅಂಗವಾಗಿ ತಾಲ್ಲೂಕಿನ ಮೇಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂಮೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣಾದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ಹಾಗೂ ಹೊಸ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಬದುಕಿಗೆ ಗಿಡ /ಮರಗಳು ಹಾಗೂ ಸುತ್ತಲಿನ ಪರಿಸರ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ,ನಮ್ಮ ಹುಟ್ಟಿದ ಹಬ್ಬಕ್ಕೆ ದುಂದು ವೆಚ್ಚ ಮಾಡುವ ಬದಲಿಗೆ ನಮ್ಮ ಸುತ್ತ ಮುತ್ತಲಿನ ಜಾಗದಲ್ಲಿ ವರ್ಷಕ್ಕೊಂದು ಗಿಡ ನೆಟ್ಟು ಪರಿಸರ ರಕ್ಷಣೆ ಮಾಡಬೇಕೆಂದು ತಿಳಿಸಿ ಯೋಜನೆಯ ಇತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಜೊತೆಗೆ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ಹಾದಿ ಹಾಗೂ ಯೋಜನೆಯಲ್ಲಿರುವ ಸವಲತ್ತುಗಳ ಮಾಹಿತಿ ನೀಡಿದರು.
ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ಸಸಿ ನೆಡಲಾಯಿತು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಸಸಿಗಳನ್ನು ವಿತರಣೆ ಮಾಡಲಾಯಿತು.
ತಾಲೂಕಿನ ಯೋಜನಾಧಿಕಾರಿಗಳಾದ ಸುಧಾ ಬಾಸ್ಕರ್ ಮಾತನಾಡಿ ಮನುಷ್ಯ ತನ್ನ ಅವಶ್ಯಕತೆಗಿಂತ ಹೆಚ್ಚಿನ ಗಿಡ/ಮರಗಳನ್ನು ನಾಶ ಮಾಡುತ್ತಿದ್ದಾನೆ.ಪರಿಸರ ಸಂರಕ್ಷಣೆಯಲ್ಲಿ ಹಾಗೂ ಗಿಡ ನೆಟ್ಟು ಪೋಷಣೆ ಮಾಡುವುದರಲ್ಲಿ ನಾವು ತುಂಬಾ ಹಿಂದೆ ಇದ್ದೇವೆ, ಹೀಗೆ ಆದರೆ ಮುಂದೆ ನಾವೆಲ್ಲ ಶುದ್ಧ ಗಾಳಿಗಾಗಿ, ಮಳೆ /ಬೆಳೆಗಾಗಿ ಕಷ್ಟವನ್ನು ಪಡುವಂತ ಪರಿಸ್ಥಿತಿ ಬರುತ್ತದೆ. ಹಾಗಾಗಿ ನಾವೆಲ್ಲರೂ ಸೇರಿ ಗಿಡ ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೇಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀನಿವಾಸ್,ಸದಸ್ಯರಾದ ಪಿಳ್ಳಣ್ಣ, ಶಿಕ್ಷಕಿ ಸವಿತಾ,ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ಮೇಲ್ವಿಚಾರಕರಾದ ದೀಪಕ್ ಸೇವಾಪ್ರತಿನಿಧಿಗಳಾದ ಸಿದ್ದಗಂಗಮ್ಮ, ರತ್ನಮ್ಮ ,ರಿಜ್ವಾನಾ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.