
ದೊಡ್ಡಬಳ್ಳಾಪುರ: ವಿನೂತನ ಯೋಜನೆಗಳನ್ನು ರೂಪಿಸುವ ಮೂಲಕ ಭಾರತ ದೇಶದ ಅಭಿವೃದ್ಧಿ ದುಪ್ಪಟ್ಟು ಮಾಡುವಲ್ಲಿ ಮೋದಿಜೀ ನೇತೃತ್ವದ ಏನ್ ಡಿ ಎ ಸರ್ಕಾರ ಶ್ರಮಿಸುವ ಭರವಸೆ ಇದೆ ಎಂದು ಜ್ಯೋತಿನಗರ ವೈಶ್ಯ ಗಾಣಿಗ ಯುವ ಸೇವಾ ಸಮಿತಿ ಅಧ್ಯಕ್ಷ ಚಂದ್ರುಶೆಟ್ಟಿ ಅಭಿಪ್ರಾಯವ್ಯಕ್ತಪಡಿಸಿದರು.
ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಮಿತಿ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲಿ ನರೇಂದ್ರ ಮೋದಿಜೀ ಯವರು ಪ್ರಮುಖರಾಗಿದ್ದಾರೆ. ತಮ್ಮ ಕಾರ್ಯ ವೈಖರಿಯಿಂದಲೇ ಜನಮನ್ನಣೆ ಗಳಿಸಿರುವ ಮೋದಿಜೀ ಮತ್ತೆ ದೇಶದ ಪ್ರಧಾನ ಸೇವಕರಾಗಿ ಅಧಿಕಾರ ಸ್ವೀಕರಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದು ಅಭಿವೃದ್ಧಿಯ ಹೊಸ ಅಧ್ಯಾಯವಾಗಲಿದೆ. ಮೋದಿಜೀಯವರ ವಿಕಸಿತ ಭಾರತದ ಕನಸು ನನಸಾಗಲಿದೆ ಎಂದರು.
ಮುಖಂಡರಾದ ನಟರಾಜ್ ಮಾತನಾಡಿ ದೇಶದ ಜನತೆಯ ಕುರಿತು ಮೋದಿಜೀಯವರ ಚಿಂತನೆಗಳು ವಿಶೇಷವಾಗಿದ್ದು. ಭಾರತವನ್ನು ವಿಕಸಿತ ಭಾರತವನ್ನಾಗಿ ಪರಿವರ್ತನೆಗೊಳಿಸುವ ಪ್ರಕ್ರಿಯೆ ಮೋದಿ 3.0ನಲ್ಲಿ ನಡೆಯಲಿದೆ. ಭಾರತ ದೇಶವು ಕೃಷಿ, ರೈಲ್ವೆ, ಆರೋಗ್ಯ ಸೇರಿದಂತೆ ಇತರ ಇಲಾಖೆಗಳಲ್ಲಿ ಹಿಂದೆಂದೂ ಕಾಣದ ಗಣನೀಯ ಅಭಿವೃದ್ಧಿಯನ್ನು ದೇಶದ ಜನತೆ ಕಳೆದ ಹತ್ತು ವರ್ಷಗಳಲ್ಲಿ ನೋಡಿದ್ದಾರೆ. ಉತ್ತಮ ರಸ್ತೆಗಳು, ಸುಸಜ್ಜಿತ ಆಸ್ಪತ್ರೆಗಳು, ನರೇಂದ್ರ ಮೋದಿಜೀ ಅವರ ಸಾಧನೆಗಳಿಗೆ ಉತ್ತಮ ಉದಾಹರಣೆಗಳಾಗಿವೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಹಕಾರ್ಯದರ್ಶಿ ವೆಂಕಟೇಶ್,ಸಂಚಾಲಕ ಮಂಜುನಾಥ್, ವೆಂಕಟೇಶ್, ಪ್ರಶಾಂತ್ ಭಾಗವಹಿಸಿದ್ದರು