
ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18 (ವಿಜಯಮಿತ್ರ):- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ 2024-25ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ 4 ವರ್ಷಗಳ ಅವಧಿಗೆ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ನಿಗದಿತ ಅವಧಿಯೊಳಗೆ ಕಛೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಲಾದ ಅರ್ಜಿಗಳನ್ನು ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216, 2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇಲ್ಲಿಗೆ ಜುಲೈ 30 ರೊಳಗೆ ಸಲ್ಲಿಸುವುದು.
ಕಾನೂನು ತರಬೇತಿ ಪಡೆಯುವ ಅಭ್ಯರ್ಥಿಯು ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಸಮುದಾಯಗಳಲ್ಲಿ ಯಾವುದಾದರೊಂದು ಸಮುದಾಯಕ್ಕೆ ಸೇರಿದ್ದು ರಾಜ್ಯದ ನಿವಾಸಿಯಾಗಿರಬೇಕು.
ಅಭ್ಯರ್ಥಿಯ ಕುಂಟುಬದ ವಾರ್ಷಿಕ ಆದಾಯವು ರೂ. 3.50,000/-ಕ್ಕೆ ಮೀರಿರಬಾರದು. ಅಭ್ಯರ್ಥಿಗಳು ಬಾರ್ ಕೌನ್ಸಿಲ್ನಲ್ಲಿ ಹೆಸರನ್ನು ನೊಂದಾಯಿಸಿರಬೇಕು. ಅಭ್ಯರ್ಥಿಯು ಕಾನೂನು ಪದವೀಧರರಾಗಿದ್ದು, ಈ ತರಬೇತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯ ವಯಸ್ಸು 30 ವರ್ಷದೊಳಗೆ ಇರಬೇಕು ಮತ್ತು ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕಕ್ಕೆ ಅಭ್ಯರ್ಥಿಯು 2 ವರ್ಷಗಳ ಅವಧಿಯೊಳಗೆ ಕಾನೂನು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗರಬೇಕು.
ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ತಿಂಗಳಿಗೆ ರೂ.5000/-ಗಳ ತರಬೇತಿ ಭತ್ಯೆಯನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಇಲಾಖೆಯ ನಿಬಂಧನೆಗಳು ಹಾಗೂ ಸರ್ಕಾರದ ಆದೇಶಗಳಿಗೆ ಬದ್ದನಾಗಿರುತ್ತೇನೆಂದು ಮುಚ್ಚಳಿಕೆಯನ್ನು ಬರೆದುಕೊಡಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 4 ವರ್ಷಗಳ ತರಬೇತಿ ಅವಧಿ ಇದ್ದು, ಮಧ್ಯದಲ್ಲಿ ತರಬೇತಿಯನ್ನು ಬಿಡಲು ಅವಕಾಶವಿರುವುದಿಲ್ಲ. ಈ ಬಗ್ಗೆ ಮುಚ್ಚಳಿಕೆ ಪತ್ರ ನೀಡಬೇಕು. ಒಂದು ವೇಳೆ ಸರ್ಕಾರಿ ಉದ್ಯೋಗ ದೊರಕಿದಲ್ಲಿ ಅಥವಾ ನ್ಯಾಯಾಧಿಕಾರಿಯಾಗಿ ನೇಮಕಾತಿ ಹೊಂದಿದಲ್ಲಿ ಜಿಲ್ಲಾ ಸಮಿತಿಯ ಗಮನಕ್ಕೆ ತಂದು ತರಬೇತಿ ಬಿಡಬಹುದು. ವಿಶೇಷ ಸಂದರ್ಭದಲ್ಲಿ ತರಬೇತಿ ಬಿಡಬೇಕಾದಲ್ಲಿ ಸರ್ಕಾರದ ಅನುಮತಿ ಪಡೆಯಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಜಿಲ್ಲಾ ಸಮಿತಿಯು ಪಬ್ಲಿಕ್ ಪ್ರಾಸಿಕ್ಯೂಟರ್/ಸರ್ಕಾರಿ ವಕೀಲರು ಅಥವಾ 20 (ಇಪ್ಪತ್ತು) ವರ್ಷಗಳಿಗಿಂತ ಹೆಚ್ಚಿನ ವರ್ಷಗಳು ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ವಕೀಲರಲ್ಲಿ ಕಾನೂನು ತರಬೇತಿ ಪಡೆಯುವ ಸಲುವಾಗಿ ತರಬೇತಿಗೆ ಕಳುಹಿಸಿ ಕೊಡಲಾಗುವುದು. ಆಯ್ಕೆಯಾದ ಅಭ್ಯರ್ಥಿಯು ಸುಳ್ಳು ಮಾಹಿತಿ/ದಾಖಲೆಗಳನ್ನು ನೀಡಿದ್ದಲ್ಲಿ ಅಥವಾ ತರಬೇತಿ ಅವಧಿಯ ಮಧ್ಯದಲ್ಲಿ ತರಬೇತಿಯಿಂದ ಬಿಟ್ಟುಹೋದಲ್ಲಿ ಸರ್ಕಾರ ಅವರಿಗಾಗಿ ಖರ್ಚು ಮಾಡಿದ ಹಣವನ್ನು ವರ್ಷಕ್ಕೆ ಶೇ.10ರ ಬಡ್ಡಿಯೊಂದಿಗೆ ಭೂ ಕಂದಾಯದ ಬಾಕಿ ಎಂದು ಪರಿಗಣಿಸಿ ವಸೂಲಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲು ಸಂದರ್ಶನದ ದಿನಾಂಕ ಹಾಗೂ ಸ್ಧಳವನ್ನು ತಿಳಿಸಲಾಗುವುದು. ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. ಅಭ್ಯರ್ಥಿಗಳು ಭರ್ತಿ ಮಾಡಲಾದ ಅರ್ಜಿಯೊಂದಿಗೆ ಅವಶ್ಯಕ ಮಾಹಿತಿಗಳಾದ ಕಾನೂನು ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳ ದೃಢೀಕರಣ ಪ್ರತಿ ಹಾಗೂ ಜನ್ಮ ದಿನಾಂಕದ ಆಧಾರಕ್ಕಾಗಿ ಎಸ್.ಎಸ್.ಎಲ್.ಸಿ.ಅಂಕಪಟ್ಟಿ ಅಥವಾ ಟಿ.ಸಿ.ದೃಢೀಕೃತ ಪ್ರತಿ ಹಾಗೂ ಆಹಾರ ಪಡಿತರ ಚೀಟಿ ಅಥವಾ ತಹಶೀಲ್ದಾರ್ರವರಿಂದ ಪಡೆದ ವಾಸಸ್ಧಳದ ದೃಢೀಕೃತ ಪತ್ರ ಸಲ್ಲಿಸಬೇಕು. ಅಪೂರ್ಣ ಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಹಾಗೂ ನಿಗದಿತ ದಿನಾಂಕ, ವೇಳೆ ಮೀರಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿಯನ್ನು ಸ್ವೀಕರಿಸುವುದಕ್ಕೆ ಜುಲೈ 30 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೊಠಡಿ ಸಂಖ್ಯೆ:216,2ನೇ ಮಹಡಿ, ಜಿಲ್ಲಾಢಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು. ಇವರ ಕಚೇರಿಯಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು ಎಂದು ಸದಸ್ಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಗ್ರಾಮಾಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.