
ದೊಡ್ಡಬಳ್ಳಾಪುರ : ತಾಲ್ಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆಬಾಬಾ ಅವರು ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನದ ಆಚರಣೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಜಿಲ್ಲೆಯ ಪ್ರತಿ ಠಾಣೆಯಲ್ಲಿ ಮಾವು, ಹಲಸು, ಸೇರಿದಂತೆ ಹಣ್ಣು, ಹೂ ನಂತಹ 50 ಗಿಡಗಳನ್ನು ನೆಡುವ ಮೂಲಕ ವಿಶೇಷ ರೀತಿಯಲ್ಲಿ ವಿಶ್ವ ಪರಿಸರ ದಿನದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯ ನವೀಕೃತಗೊಂಡ ಕಟ್ಟಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಹಾಗೂ ಆಪ್ತ ಸಲಹೆ – ಕಾನೂನು ಸೇವಾ ಕೇಂದ್ರ ವನ್ನು ಉಪವಿಭಾಗಾಧಿಕಾರಿ ದುರ್ಗಾ ಶ್ರೀ ಹಾಗೂ ಪೊಲೀಸ್ ವರಿಷ್ಠರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಮಾತನಾಡಿ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನದ ಆಚರಣೆ ಮಾಡಲಾಗುತ್ತದೆ ಅಂತೆಯೇ ನಮ್ಮ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯ ಪ್ರತಿ ಠಾಣೆಗಳಲ್ಲಿ 50 ಗಿಡಗಳನ್ನು ನೆಡುವ ಮೂಲಕ ಹಸಿರು ಪರಿಸರ ಬೆಳೆಸಿ ಉಳಿಸುವ ನಿಟ್ಟಿನಲ್ಲಿ ವಿಶೇಷವಾಗಿ ವಿಶ್ವ ಪರಿಸರ ದಿನದ ಆಚರಣೆಗೆ ಮುಂದಾಗಿದ್ದೇವೆ.
ಈ ಹಸಿರು ಉಳಿಸುವ ನಿಟ್ಟಿನಲ್ಲಿ ಆರಂಭಿಸಿರುವ ಅಭಿಯಾನದಲ್ಲಿ ನಮ್ಮ ಇಲಾಖೆಯ ಪ್ರತಿ ಸಿಬ್ಬಂದಿಯು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ರಾಜ್ಯಾದ್ಯಂತ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಏಕಕಾಲದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಪೊಲೀಸ್ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದರು.
ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಮಹಿಳಾ ಪೊಲೀಸ್ ಠಾಣೆಯನ್ನು ಸ್ಥಳೀಯ ಪೊಲೀಸ್ ಇನ್ಸ್ಪೆಕ್ಟರ್ ಸಾಕಷ್ಟು ಶ್ರಮವಹಿಸಿ ಉತ್ತಮ ರೀತಿಯಲ್ಲಿ ನವೀಕರಣಗೊಳಿಸಿದ್ದಾರೆ ಕೇವಲ ಠಾಣೆ ಅಷ್ಟೇ ಅಲ್ಲದೆ ಆಪ್ತ ಸಲಹೆ – ಕಾನೂನು ಸೇವಾ ಕೇಂದ್ರವನ್ನು ವಿಶೇಷವಾಗಿ ನಿರ್ಮಾಣ ಮಾಡಿದ್ದು ಇನ್ಸ್ಪೆಕ್ಟರ್ ಹಾಗೂ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೆ ಮುಂದಿನ ದಿನಗಳಲ್ಲಿ ಠಾಣೆಗೆ ಬರುವ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಂಥಾಲಯ, ಮಕ್ಕಳಿಗಾಗಿ ವಿಶೇಷ ಕೊಠಡಿ ನಿರ್ಮಿಸುವ ಉದ್ದೇಶ ಇದೆ ಎಂದರು.
ತಾಲೂಕಿನಲ್ಲಿ ಇತ್ತೀಚೆಗೆ ನೆಡೆದ ಹಂದಿ ಕಳ್ಳತನ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ರಾಯಚೂರು ಸಿಂಧನೂರು ಭಾಗದ ಗುಂಪೊಂದು ಈ ಹಂದಿ ಕಳ್ಳತನದಲ್ಲಿ ಭಾಗಿಯಾಗಿತ್ತು ಅವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಗುಂಪು ಸುಮಾರು 7 ರಿಂದ 8 ಲಕ್ಷ ರೂಪಾಯಿ ಮೌಲ್ಯದ ಹಂದಿಗಳನ್ನು ಸುಮಾರು 5 ಕಡೆ ಕಳವು ಮಾಡಿರುತ್ತದೆ.ನಮ್ಮ ಪೊಲೀಸ್ ಇಲಾಖೆ ಶೀಘ್ರಗತಿಯಲ್ಲಿ ತನಿಖೆ ಆರಂಭಿಸಿ ಈಗಾಗಲೇ ಕಳ್ಳರ ಎಡೆಮುರಿ ಕಟ್ಟಿದ್ದೇವೆ ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಈ ವೇಳೆ ಎಎಸ್ಪಿ ಡಾ.ವೆಂಕಟೇಶ್ ಪ್ರಸನ್ನ, ಡಿವೈಎಸ್ ಪಿ ರವಿ.ಪಿ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ದುರ್ಗಶ್ರೀ, ಪೌರಾಯುಕ್ತ ಕಾರ್ತೀಕೇಶ್ವರ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ, ಮಹಿಳಾ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾರ್ ಎಂ.ಬಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.