
ದೊಡ್ಡಬಳ್ಳಾಪುರ : ಸುಪ್ರೀಂ ಕೋರ್ಟ್ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ಮೇಲೆ ಶೂ ಎಸೆತ ಪ್ರಯತ್ನದ ಪ್ರಕರಣವನ್ನು ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಬೆಂಗಳೂರು ಜಿಲ್ಲಾ ಸಂಚಾಲಕ ರಾಮಾಮೂರ್ತಿ (ರಾಮು) ನೇರಳೆಘಟ್ಟ ತಿಳಿಸಿದರು.
ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸ ಬೇಕು. ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ನಡೆಸಿ, ಈ ದಾಳಿಯ ಹಿಂದಿನ ಹುನ್ನಾರವನ್ನು ಕೇಂದ್ರ ಸರ್ಕಾರ ಬಯಲಿಗೆಳೆಯ ಬೇಕೆಂದು ಒತ್ತಾಯಿಸಿದ್ದಾರೆ.
ಪ್ರಕರಣ ಕುರಿತು ಮಾತನಾಡಿದ ಅವರು ಇದು ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ದಾಳಿಯಲ್ಲ. ಇದು ಭಾರತದ ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ದೇಶದಲ್ಲಿ ಸಂವಿಧಾನ ಜಾರಿಯಾದಾಗಲೇ ನಮ್ಮ ದೇಶದ ಸಂವಿಧಾನವನ್ನು ಈ ಸನಾತನವಾದಿಗಳು ವಿರೋಧಿಸಿದ್ದರು. ದಲಿತನೊಬ್ಬ ಮುಖ್ಯ ನ್ಯಾಯಮೂರ್ತಿಯ ಪೀಠದಲ್ಲಿ ಕೂತು ನ್ಯಾಯ ಕೊಡುವುದನ್ನು ಈ ಸನಾತನವಾದಿಗಳು ಯಾವೊತ್ತು ಒಪ್ಪಿಕೊಳ್ಳುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದಿದ್ದಾರೆ.
ಇತ್ತೀಚೆಗೆ ಆರೆಸ್ಸೆಸ್ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ನಿರಾಕರಿಸಿದ ಗವಾಯಿ “ತಾನು ಅಂಬೇಡ್ಕರ್ವಾದಿ. ಆರ್ ಎಸ್ ಎಸ್ ನಂತಹ ಕಾರ್ಯಕ್ರಮಕ್ಕೆ ಹೋಗೋಕೆ ಸಾಧ್ಯವೇ ಇಲ್ಲ” ಎಂದು ಹೇಳಿದ್ದರು.
ಇದರ ಬೆನ್ನಲ್ಲೆ ವಿಚಾರಣೆಯ ವೇಳೆಯಲ್ಲಿ ವಕೀಲನೊಬ್ಬ ಚಪ್ಪಲಿ ಎಸೆಯಲೆತ್ನಿಸಿದ್ದಾನೆ. ಸನಾತನ ಧರ್ಮಕ್ಕೆ ಅಪಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಉದ್ದಟತನದಿಂದ ಮಾತನಾಡಿರುವುದು ಸನಾತನವಾದಿಗಳ ಮುಖವಾಡ ಕಳಚಿದಂತಾಗಿದೆ ಎಂದಿದ್ದಾರೆ.
ಸಿ ಜೆ ಐ ಗವಾಯಿಯವರು ಉತ್ತರ ಪ್ರದೇಶ ಸರ್ಕಾರದ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಿದ್ದಲ್ಲದೆ ಯಾವುದೇ ಪ್ರಕರಣವಿದ್ದರೂ ಸಂವಿಧಾನದಡಿಯಲ್ಲಿ ಆದೇಶ ನೀಡುತ್ತಿರುವುದು ಸನಾತನವಾದಿಗಳಿಗೆ ಬಿಸಿ ತುಪ್ಪವಾಗಿದೆ ಎಂದರು.