
ದೊಡ್ಡಬಳ್ಳಾಪುರ : ವಾರದಲ್ಲಿ ಎರಡು ಮೂರು ದಿನ ಮಕ್ಕಳು ಕಾಯಿಲೆಗೆ ಒಳಗಾಗುತ್ತಿದ್ದಾರೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಕೊಳೆತ ನೀರಿನ ವಾಸನೆಗೆ ಮನೆಯಲ್ಲಿ ವಾಸಿಸಲು ಆಗುತ್ತಿಲ್ಲ ನಮ್ಮ ಗೋಳು ಯಾರಿಗೆ ಹೇಳುವುದು ಎಂದು ಕಛೇರಿ ಪಾಳ್ಯ ನಿವಾಸಿಗಳು ತಮ್ಮ ನೋವನ್ನು ಹೇಳಿಕೊಂಡರು
ತಾಲ್ಲೂಕು ಕಚೇರಿಯ ಕೂಗಳತೆ ದೂರದಲ್ಲಿ ಇರುವ ಮನೆಗಳ ಪರಿಸ್ಥಿತಿ ಇದಾಗಿದ್ದು ತಾಲ್ಲೂಕಿನ ಕಛೇರಿ ಪಾಳ್ಯದ ಕೆಲ ಮನೆಗಳ ನಿವಾಸಿಗಳು ಕೊಳೆತ ಕಲುಷಿತ ನೀರಿನ ಪಕ್ಕದಲ್ಲಿ ಜೀವನ ಸಾಗಿಸುವಂಥಾಗಿದೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಮುಖ್ಯ ವಾರ್ಡ್ ಗಳಲ್ಲಿ ಒಂದಾದ ಕಛೇರಿ ಪಾಳ್ಯದ ಪರಿಸ್ಥಿತಿ ನೋಡಲಾಗದು ಸುತ್ತ ಮುತ್ತಲಿನ ಕೊಳಚೆ ನೀರು ಕಛೇರಿ ಪಾಳ್ಯದಲ್ಲಿ ಕುಂಟೆರೀತಿಯ ಗುಂಡಿ ಸೇರುತ್ತಿದ್ದು ಗುಂಡಿಯ ಪಕ್ಕದಲ್ಲಿ ಇರುವ ಮನೆಗಳಿಗೆ ಕೊಳಚೆ ನೀರಿನ ವ್ಯವಸ್ಥೆಯಿಂದಾಗಿ ಸಮಸ್ಯೆ ಎದುರಾಗಿದೆ
ಸ್ಥಳೀಯರಾದ ಲತಾ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ಬರುವ ಎಲ್ಲಾ ನಾಯಕರೂ ಆಶ್ವಾಸನೆ ನೀಡಿ ಹೋಗುತ್ತಾರೆ ಆದರೆ ಚುನಾವಣೆ ನಂತರ ಯಾರೊಬ್ಬರೂ ನಮ್ಮ ಮನೆಗಳ ಕಡೆ ಬರುವುದಿಲ್ಲ ಮನೆಯಲ್ಲಿ ಪುಟ್ಟ ಮಕ್ಕಳಿದ್ದಾರೆ ಆರೋಗ್ಯದ ಸಮಸ್ಯೆಗಳು ಎದುರಾಗಿದ್ದು ನಮ್ಮ ಗೋಳು ಕೇಳುವವರಿಲ್ಲ ನಗರಸಭೆಯ ಸಿಬ್ಬಂದಿಯೂ ಸಹ ನಮ್ಮ ಮನೆಗಳ ಕಡೆ ಬರುತ್ತಿಲ್ಲ ನಮ್ಮ ಪರಿಸ್ಥಿತಿ ಹೇಳಿಕೊಂಡರು ಯಾರಿಗೂ ಅರ್ಥವಾಗುತ್ತಿಲ್ಲ ನಗರ ಸಭೆಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ ನಮ್ಮ ಆರೋಗ್ಯದ ದೃಷ್ಟಿಯಿಂದ ಕೊಳಚೆ ನೀರು ಉತ್ತಮ ರೀತಿಯಲ್ಲಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು
ಸ್ಥಳೀಯರಾದ ಶಂಕರ್ ಮಾತನಾಡಿ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಸಲ್ಲದು ನಮಗೆ ಯಾರ ಮೇಲೂ ಅರೋಪವಿಲ್ಲ .ಮಕ್ಕಳು ಶಾಲೆಯಿಂದ ಹೊಟ್ಟೆನೋವು, ಜ್ವರ ,ವಾಂತಿ ಎಂದು ಮನೆಗೆ ಬರುತ್ತಿದ್ದು ಆರೋಗ್ಯದ ಸಮಸ್ಯೆಯಿಂದ ವಿಧ್ಯಾಭ್ಯಾಸ ಹಾಳಾಗುತ್ತಿದೆ .ನಮ್ಮ ನೆಮ್ಮದಿಯ ಬದುಕಿಗೆ ,ಉತ್ತಮ ಆರೋಗ್ಯಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸಿ ಹಾಗೂ ಸ್ವಚ್ಛತೆ ಕಾಪಾಡಲು ನಗರ ಸಭಾ ಸಿಬ್ಬಂದಿ ಸಹಕರಿಸಬೇಕೆಂದು ಮನವಿ ಮಾಡಿದರು