
ದೊಡ್ಡಬಳ್ಳಾಪುರ (ತೂಬಗೆರೆ) ಜೂ. 7:- ಹದಗೆಟ್ಟ ರಸ್ತೆಯಿಂದಾಗಿ ಬೇಸತ್ತಗ್ರಾಮಸ್ಥರು ದಿಡೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ತಾಲೂಕಿನ ತೂಬಗೆರೆ -ಮಂಚೇನಹಳ್ಳಿ ಮಾರ್ಗ ಮಧ್ಯದಲ್ಲಿ ನಡೆದಿದೆ.
ಎರಡು ವಾರದಿಂದ ಸುರಿದ ಮಳೆಯಿಂದಾಗಿ ರಸ್ತೆ ಹದಗೆಟ್ಟಿದ್ದು, ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿ ಕೆಸರು ಗದ್ದೆಯಂತಾಗಿದೆ. ಈ ರಸ್ತೆಗಳಲ್ಲಿ ಸಂಚಾರ ಮಾಡುವ ಗ್ರಾಮಸ್ಥರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದು. ಇಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಾಗೂ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿದ್ದಾರೆ
ಈ ಬಗ್ಗೆ ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಿಸುವಂತೆ ಸತತ ಮೂರ್ನಾಲ್ಕು ವರ್ಷದಿಂದ ಸಾಕಷ್ಟು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗೂ ಕೆಲ ದಿನಗಳ ಹಿಂದೆ ರಸ್ತೆಗೆ ತೇಪೆ ಹಾಕಿ ಅಧಿಕಾರಿಗಳು ಕೈತೋಳೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಇದಕ್ಕೆಲ್ಲ ಕಾರಣ.. ಎಂದು ದೂರಿದ್ದಾರೆ.
ರಸ್ತೆ ಕಿರಿಕಿರಿಯಿಂದ ಬೇಸತ್ತ ಗ್ರಾಮಸ್ಥರು ಶುಕ್ರವಾರ ರಸ್ತೆಯ ಗುಂಡಿಗಳ ಬಳಿ ನಿಂತು ಪ್ರತಿಭಟನೆ ನಡೆಸಿದರು . ಸ್ಥಳೀಯ ಶಾಸಕರು ಹಾಗೂ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಇನ್ನಾದರೂ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಿ ಎಂದರು.
ಗ್ರಾಮದ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳುಸಂಚರಿಸುವುದು ಕಷ್ಟವಾಗಿದೆ. ಇದರಿಂದಾಗಿ ಮಕ್ಕಳು ಶಾಲೆಗೆ ಹೋಗಲು ಆಗುತ್ತಿಲ್ಲ.ರಸ್ತೆ ಹಾಳಾಗಿರುವುದರಿಂದ ದಿನನಿತ್ಯ ಜೀವನ ನಡೆಸುವುದು ಸಹ ಕಷ್ಟವಾಗಿದೆ. ಬಿತ್ತನೆ ಸಮಯದಲ್ಲಿ ರಸಗೊಬ್ಬರ ಇತ್ಯಾದಿ ತರಲು ರೈತರು ಕಷ್ಟ ಅನುಭವಿಸಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳ ಕಾರಣ ವ್ಯವಸಾಯ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಕಷ್ಟಕರವಾಗಿದೆ. ಅಲ್ಲದೇ ಸೋಮವಾರ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಗ್ರಾಮಸ್ಥರು ಹರಸಾಹಸವನ್ನೇ ಪಟ್ಟಿದ್ದಾರೆ. ಎಂದು ಪ್ರತಿಭಟನಾನಿರತರೊಬ್ಬರು ಮಾತನಾಡಿ ರಸ್ತೆಯ ಅವಸ್ಥೆಯನ್ನು ಖಂಡಿಸಿ, ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಸ್ಥಳೀಯ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸುವ ಮೂಲಕ ರೈತರಿಗೆ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಿ ಎಂಬುದೇ ವಿಜಯ ಮಿತ್ರ ಸುದ್ದಿವಾಹಿನಿಯ ಆಶಯ..