ಜಿಲ್ಲೆಯಲ್ಲಿ ಶಾಶ್ವತವಾಗಿ ನೀರಿನ ಬವಣೆಯನ್ನು ನಿಗಿಸುವಂತೆ ಅಗ್ರಹಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಶಾಶ್ವತ ನೀರಾವರಿ ಹೋರಾಟ ಸಮಿತಿ ಆಶ್ರಯದಲ್ಲಿ ಕನ್ನಡ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆ ನೆಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ಶಾಸಕರ ಮುಖವಾಡ ಧರಿಸಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ಮಾಡಲಾಯಿತು.

ಜುಲೈ 18 ರ ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ ಅಂಜನ್ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಅತ್ಯಧಿಕವಾಗಿದ್ದು ಸಮಸ್ಯೆ ಪರಿಹರಿಸುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಬೇಕಿದೆ. ಕಾರ್ಖಾನೆ ಹೊರಸೂಸುವ ತ್ಯಾಜ್ಯಗಳ ನೀರು ಅಂತರ್ಜಲ ಸೇರುವ ಮೂಲಕ ಜಲ ಮೂಲಗಳು ಸಂಪೂರ್ಣ ಹಾಳಾಗುತ್ತಿವೆ ಈ ಕುರಿತು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಜನತೆಯ ಜೀವ ಕಾಪಾಡಬೇಕಿದೆ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯಕ್ ಮಾತನಾಡಿ ಅಧಿಕಾರಿಗಳು ಸಮಸ್ಯೆಯ ತೀವ್ರತೆ ಅರಿತು ಪರಿಸರ ಹಾಗೂ ಜನರ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ನಮ್ಮ ಹೋರಾಟ ಶುದ್ಧ ನೀರಿಗಾಗಿ ಮನುಷ್ಯರಿಗೆ ನೀರು ಅತ್ಯವಶ್ಯಕವಾಗಿದ್ದು. ಜಿಲ್ಲೆಯಲ್ಲಿ ಸರ್ವರಿಗೂ ನೀರು ಸಮರ್ಪಕವಾಗಿ ದೊರೆಯುವಂತೆ ಯೋಜನೆ ರೂಪಿಸಬೇಕಿದೆ ಎಂದರು.
ಕನ್ನಡ ಪಕ್ಷದ ತಾಲೂಕುಘಟಕದ ಅಧ್ಯಕ್ಷ ಡಿ. ವೆಂಕಟೇಶ್ ಮಾತನಾಡಿ ಜಿಲ್ಲೆಯಲ್ಲಿ ನೀರಿಗೆ ಸಂಬಂಧಿಸಿದಂತೆ ನಿರಂತರ ಹೋರಾಟಗಳು ನಡೆಯುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ನಮ್ ಕಾ ವಾಸ್ತೆ ಅಧಿಕಾರಿಗಳು ಭೇಟಿಕೊಟ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುವುದು ನಾವು ಕಾಣುತ್ತೆವೆ. ಅಧಿಕಾರಿಗಳು ಸಮಸ್ಯೆಯ ಸೂಕ್ಷ್ಮತೆ ಅರಿತು ಸೂಕ್ತ ಕ್ರಮ ಕೈಗೊಂಡು ನೀರಿನ ಸಮಸ್ಯೆ ಬಗೆಹರಿಸಬೇಕಿದೆ ಎಂದರು.
ತಾಲೂಕು ರೈತ ಸಂಘದ ಮುಖಂಡರಾದ ತಿಮ್ಮೇಗೌಡ, ಶ್ರೀನಿವಾಸ್,ಮುತ್ತೇ ಗೌಡ್ರು,ಜಿಲ್ಲಾ ಅಧ್ಯಕ್ಷರಾದ ಮುನಿ ಪಾಪಯ್ಯ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
