ದೇವನಹಳ್ಳಿ, ಏಪ್ರಿಲ್ 18, ( ವಿಜಯಮಿತ್ರ) : ಪ್ರಧಾನಿ ನರೇಂದ್ರ ಮೋದಿಯವರು ನಿಜವಾದ ಮಹಿಳಾ ಸಬಲೀಕರಣ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಕೇವಲ ಕೈಗೆ 2 ಸಾವಿರ ರೂಪಾಯಿ ನೀಡಿರುವುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಏನು ಮಾಡಿದೆ ಎಂದು ಪ್ರಶ್ನಿಸಿದರೆ 2 ಸಾವಿರ ರೂಪಾಯಿ ಎನ್ನುತ್ತಾರೆ. ಆದರೆ ಕೋವಿಡ್ ಅವಧಿಯಿಂದ ಆರಂಭವಾಗಿ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮುಂದಿನ ಐದು ವರ್ಷವೂ ಈ ಯೋಜನೆ ಮುಂದುವರಿಸುವುದಾಗಿ ಬಿಜೆಪಿ ತಿಳಿಸಿದೆ. ವಿಧಾನಸಭೆ ಮತ್ತು ಲೋಕಸಭೆಯಲ್ಲಿ 33% ಮಹಿಳಾ ಮೀಸಲಾತಿ ತಂದಿದ್ದು, ಇದರಿಂದ ಮಹಿಳೆಯ ರಾಜಕೀಯ ಸಬಲೀಕರಣ ಸಾಧ್ಯವಾಗಲಿದೆ. ಮಹಿಳೆಯರು ಉದ್ಯಮಿಗಳಾಗಿ ಬೆಳೆಯಲು ಮುದ್ರಾ ಯೋಜನೆಯಡಿ *20 ಲಕ್ಷ ರೂ.* ಸಾಲ ನೀಡಲಾಗುತ್ತದೆ. ಇದು ನಿಜವಾದ ಸಬಲೀಕರಣವೇ ಹೊರತು ಕೈಗೆ ಹಣ ನೀಡುವುದಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಜನ ಔಷಧಿ ಮಳಿಗೆಗಳನ್ನು ನೀಡಿದ್ದು, 40-50% ರಿಯಾಯಿತಿ ದರದಲ್ಲಿ ಔಷಧಿ ದೊರೆಯುತ್ತಿದೆ. ಇನ್ನು ಮುಂದೆ ಪ್ರಮುಖ ಔಷಧಿಗಳನ್ನು *90% ರಿಯಾಯಿತಿ ದರದಲ್ಲಿ* ನೀಡುವುದಾಗಿ ತಿಳಿಸಲಾಗಿದೆ. ಬಡವರಿಗೆ 3 ಕೋಟಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಈಗಾಗಲೇ 11 ಕೋಟಿ ಕುಟುಂಬಗಳಿಗೆ ಅಡುಗೆ ಅನಿಲ ನೀಡಿದ್ದು, ಇದನ್ನೂ ಮುಂದುವರಿಸಲಾಗುವುದು. ಆದರೆ ಕಾಂಗ್ರೆಸ್ ಸಣ್ಣ ಆಸೆ ತೋರಿಸಿ ಆರ್ಥಿಕ ಪರಿಸ್ಥಿತಿ ಹಾಳು ಮಾಡಿದೆ ಎಂದರು.
ಕೋವಿಡ್ ಬಂದಾಗ ನಾನು ಆರೋಗ್ಯ ಸಚಿವನಾಗಿ ಜನರಿಗೆ ಲಸಿಕೆ ನೀಡಿದ್ದೆ. ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಳ ಮಾಡಿಸಿದ್ದೆ. ಆದರೆ ಈ ಸರ್ಕಾರ ಹಾಲಿನ ಪ್ರೋತ್ಸಾಹಧನ, ಕಿಸಾನ್ ಸಮ್ಮಾನ್, ಹಾಲು ಒಕ್ಕೂಟ ಎಲ್ಲವನ್ನೂ ಕಿತ್ತುಕೊಂಡಿದೆ. ವಿಧಾನಸೌಧದಲ್ಲಿ *ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ* ಕೇಳಿಬರುತ್ತದೆ. ಇಂತಹವರು ಸರ್ಕಾರ ಮಾಡಬೇಕಾ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಗಳಲ್ಲಿ ಭಾರತ 5 ನೇ ಸ್ಥಾನಕ್ಕೆ ಬಂದಿದ್ದು, ಮುಂದಿನ ವರ್ಷಗಳಲ್ಲಿ ಜಪಾನ್ ಮೊದಲಾದ ದೇಶಗಳನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ಸಾಗಲಿದ್ದೇವೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ನೀರಾವರಿ ಹಾಗೂ ಜನಜೀವನಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಲು ಮತ ನೀಡಿ ಎಂದು ಮನವಿ ಮಾಡಿದರು.
*ಭ್ರಷ್ಟಾಚಾರದಿಂದಲೇ ಸೋತಿದ್ದಾ?: ಸಿಎಂ ಸಿದ್ದರಾಮಯ್ಯಗೆ ಡಾ.ಕೆ.ಸುಧಾಕರ್ ಪ್ರಶ್ನೆ*
2018 ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನು ಸೋಲಿಸಿದ್ದರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಡಾ.ಕೆ.ಸುಧಾಕರ್ ಪ್ರಶ್ನಿಸಿದ್ದಾರೆ.
2019 ರಲ್ಲಿ ನಿಮ್ಮ ನಾಯಕ ರಾಹುಲ್ ಗಾಂಧಿ ಅವರು 55,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತಿದ್ದರು. ನಿಮ್ಮ ಪ್ರಕಾರ ರಾಹುಲ್ ಗಾಂಧಿ ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಿ. ಅದರಲ್ಲೇ ನಿಮ್ಮ ತನಿಖೆ *ಎಷ್ಟು ಪೂರ್ವಗ್ರಹ ಪೀಡಿತ,* ಎಷ್ಟು ನಿಷ್ಪಕ್ಷಪಾತ ಎಂದು ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
ಎಲ್ಲಾ ಸರ್ವೆ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್‌ಡಿಎ ಗೆಲ್ಲುತ್ತದೆ, ನಾನು ಗೆಲ್ಲಲಿದ್ದೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದೀರಿ. ಈ ಎಲ್ಲ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗು ಬಾಣ ಆಗಲಿದೆ. 2013 ರಿಂದ 2018 ರವರೆಗೆ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ನಾನು ಆಗ ನೋಡಿದ್ದ ಸಿದ್ದರಾಮಯ್ಯನವರಿಗೂ ಈಗ ನೋಡುತ್ತಿರುವ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ. ನಿಮ್ಮ ಸ್ಥಿತಿ ಬಗ್ಗೆ ಕನಿಕರವಿದೆ ಎಂದು ಅವರು ಹೇಳಿದ್ದಾರೆ.

ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ *ಒಕ್ಕಲಿಗ ದ್ವೇಷ ಗುಟ್ಟೇನೂ* ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ. ನನ್ನ ಸೋಲು ಗೆಲುವು ಮತದಾರರು ನಿರ್ಧಾರ ಮಾಡುತ್ತಾರೆ. ನಿಮಗೆ ಒಳ್ಳೆಯದಾಗಲಿ ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
