
ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿದೆ. ಕಸಬಾ ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಬಾಶೆಟ್ಟಿಹಳ್ಳಿ ಕೆರೆಯಲ್ಲಿ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ಕೆರೆಗೆ ಸೇರಿರುವ ಪರಿಣಾಮ ಸಾವಿರಾರು ಮೀನುಗಳು ಮೃತಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಯಲ್ಲಿ ಸಾವಿರಾರು ಮೀನುಗಳ ಸಾವಿನಿಂದ ದರ್ವಾಸನೆ ಉಂಟಾಗಿದ್ದು. ಕಳೆದ ಎರಡು ಮೂರು ದಿನಗಳ ಹಿಂದೆ ಕೆರೆಗೆ ಕಾರ್ಖಾನೆಗಳ ರಾಸಯನಿಕ ಮಿಶ್ರಿತ ತ್ಯಾಜ್ಯ ನೀರು ಹರಿದಿದ್ದರಿಂದ ಕಾರಣ ಮೀನುಗಳು ಸಾವನ್ನಪ್ಪಿವೆ ಎಂದು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸೊಣ್ಣೇಗೌಡ ಆರೋಪಿಸಿದ್ದಾರೆ.
ಕೆರೆಯಲ್ಲಿ ಮೀನುಗಳು ಸಾವನ್ನಪ್ಪಿ ಈಗಾಲೇ ಮೂರು ದಿನಗಳು ಕಳೆದಿವೆ. ದಡಕ್ಕೆ ಬಂದು ಸೇರಿರುವ ರಾಶಿ ರಾಶಿ ಮೀನುಗಳು ಕೊಳೆತು ಗಬ್ಬುನಾರುತ್ತಿವೆ. ನೀರಿನಲ್ಲಿಯೇ ಹಾಗೆ ಬಿಟ್ಟರೆ ನೀರು ಮತ್ತಷ್ಟು ಮಲೀನಗೊಳ್ಳುವ ಆತಂಕ ಎದುರಾಗಿದೆ. ಮೀನುಗಾರಿಕೆ ಇಲಾಖೆ ಅಥವಾ ಸಂಬಂಧಟ್ಟ ಇಲಾಖೆಯವರು ಮೃತ ಮೀನುಗಳನ್ನು ಕೆರೆಯಿಂದ ತೆಗೆದು ಗುಂಡಿಯಲ್ಲಿ ಹಾಕಿ ವಿಲೇವಾರಿ ಮಾಡಬೇಕಿದೆ.
ದೊಡ್ಡಬಳ್ಳಾಪುರದಲ್ಲಿ ಸಾವಿರಾರು ಕೈಗಾರಿಕೆಗಳು, ಕಾರ್ಖಾನೆಗಳು, ಗಾರ್ಮೆಂಟ್ಸ್ ಗಳು ಚಾಲ್ತಿಯಲ್ಲಿವೆ. ಜಿಲ್ಲಾಧಿಕಾರಿಗಳ ಕಾರ್ಯಾಲಯವು ಜಿಲ್ಲೆಗೆ ಸ್ಥಳಾಂತರವಾಗಿದೆ. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮಾತ್ರ ವರ್ಷಾನುಗಟ್ಟಲೆ ಕಳೆದರೂ ಸಹ ಬೆಂಗಳೂರಿನಿಂದ ಗ್ರಾಮಾಂತರಕ್ಕೆ ಬಂದಿಲ್ಲ. ಇಂತಹ ಘಟನೆಗಳು ಸಂಭವಿಸಿದಾಗ ದೂರು ಕೊಡಲು ಬೆಂಗಳೂರಿಗೆ ಹೋಗಿ ಬರುವಷ್ಟರಲ್ಲಿ ಘಟನೆ ಮಾಸಿ ಹೋಗಿರುತ್ತದೆ ಎಂದು ಬಾಶೆಟ್ಟಿಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪರ ಹೋರಾಟಗಾರರಾದ ರಾಜಘಟ್ಟರವಿ ಮಾತನಾಡಿ ಈ ಭಾಗದ ಕೆರೆಗಳಲ್ಲಿ ಮೀನುಗಳ ಮಾರಣ ಹೋಮ ಇದೇ ಮೊದಲಲ್ಲ. ಕೊನೆಯೂ ಅಲ್ಲ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಲೇ ಇದೆ. ಕೈಗಾರಿಕಾ ತ್ಯಾಜ್ಯ ನೀರನ್ನು ರಾತ್ರೋರಾತ್ರಿ ಕಳ್ಳದಾರಿಯಲ್ಲಿ ಕೆರೆಗೆ ಹರಿಸಿರುವುದರಿಂದ ಇಂದು ಮೀನುಗಳು ಸಾವನ್ನಪ್ಪಿವೆ. ಇದಕ್ಕೆ ಕಾರಣರಾದವರ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು
ಈ ಸಂದರ್ಭದಲ್ಲಿ ಸ್ಥಳೀಯರಾದ ಲೋಹಿತ್, ವಿಶ್ವನಾಥ್, ಜನಾರ್ಧನ,ಕಾರ್ತಿಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು