ಪರಿಸರದ ಮೇಲೆ ನಿಲ್ಲದ ಕೆಮಿಕಲ್ ದಾಳಿ : ಬೆಸೆಂಟ್ ಪಾರ್ಕ್ ಪಕ್ಕದಲ್ಲಿ ಕೆಮಿಕಲ್ ನೀರು ಪತ್ತೆ

ಜಿಲ್ಲೆ ತಾಲೂಕು
Spread the love

ದೊಡ್ಡಬಳ್ಳಾಪುರ : ನಗರದ ಹೊರವಲಯದ ಬೆಸೆಂಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಕೆಮಿಕಲ್ ನೀರು ಸುರಿದು ಪರಾರಿಯಾಗಿದ್ದಾರೆ.

ಹೌದು ಕೆಮಿಕಲ್ ಯುಕ್ತ ನೀರು ರಸ್ತೆ ಬದಿ ಬಿಡಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರರು ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಮತ್ತು ಬಾಶೆಟ್ಟಿಹಳ್ಳಿ ಪಂಚಾಯಿತಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದರು, ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು ಕೆಮಿಕಲ್ ನೀರು ಸುರಿದು ಪರಾರಿಯಾಗಿರುವರನ್ನು ಪತ್ತೆ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು ಒತ್ತಾಯಕ್ಕೆ ಮಣಿದ ಅಧಿಕಾರಿಗಳು ಕಲುಷಿತ ನೀರನ್ನು ಪರಿಶೀಲಿಸಲು ಮುಂದಾಗಿದ್ದಾರೆ.

 

 

ಬೆಂಗಳೂರು ನಗರಕ್ಕೆ ಹತ್ತಿರವಿರುವ ದೊಡ್ಡಬಳ್ಳಾಪುರ ತಾಲ್ಲೂಕು ಕಸ ತಂದು ಸುರಿಯುವ ಡಪ್ಪಿಂಗ್ ಯಾರ್ಡ್ ಆಗಿದೆ, ಬಿಬಿಎಂಪಿ ಕಸದ ರಾಶಿಗಳು ತಾಲೂಕಿನಲ್ಲಿ ಕೊಳೆಯುತ್ತಿರುವ ಸಂದರ್ಭದಲ್ಲಿ ಕೈಗಾರಿಕೆಗಳ ಮಾಲೀಕರು ನಿರ್ಜನ ಪ್ರದೇಶದಲ್ಲಿ ಕೆಮಿಕಲ್ ತ್ಯಾಜ್ಯ ನೀರನ್ನು ಬಿಟ್ಟು ಪರಾರಿಯಾಗುತ್ತಿದ್ದಾರೆ.ಮೊನ್ನೆ ಗುಂಡಮಗೆರೆ ಅರಣ್ಯ ಪ್ರದೇಶದಲ್ಲಿ ಕೆಮಿಕಲ್ ನೀರು ಬಿಟ್ಟಿದ್ದ ದುಶ್ಕರ್ಮಿಗಳು ಇಂದು ಬೆಸೆಂಟ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ಕೆಮಿಕಲ್ ನೀರು ಸುರಿದು ಪರಾರಿಯಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರಾದ ವಾಸು ಮಾತನಾಡಿ ಬೆಸೆಂಟ್ ಪಾರ್ಕ್ ಸ್ಥಳದಿಂದ ಪಕ್ಕದಲ್ಲೇ ಇರುವ ಓಬದೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ರಸ್ತೆ ಸಂಪರ್ಕ ಇದ್ದು, ರಸ್ತೆಯಲ್ಲಿ ಬೀದಿ ದೀಪಗಳಿಲ್ಲ, ಇದರ ಲಾಭ ಪಡೆದ ದುಶ್ಕರ್ಮಿಗಳು ರಾತ್ರಿ ವೇಳೆ ಜನರು ಓಡಾಟ ಇಲ್ಲದ ಸಮಯದಲ್ಲಿ ಟ್ಯಾಂಕರ್ ನಲ್ಲಿ ಕೆಮಿಕಲ್ ನೀರು ತಂದು ಸುರಿದು ಹೋಗುತ್ತಿದ್ದಾರೆ.ಕಳೆದ 20 ದಿನಗಳಿಂದ ಕೆಮಿಕಲ್ ನೀರು ಸುರಿಯಲಾಗುತ್ತಿದೆ, ಕೆಮಿಕಲ್ ಮಿಶ್ರಿತ ನೀರಿನಿಂದಾಗಿ ಸ್ಥಳದಲ್ಲಿ ಗಿಡಗಳು ಸುಟ್ಟು ಹೋಗಿದೆ, ಸ್ಥಳದಲ್ಲಿ ನಿಂತುಕೊಳ್ಳುವುದಕ್ಕೂ ಸಾಧ್ಯವಾಗದ ಕೆಟ್ಟ ವಾಸನೆ ಇದೆ. ಸ್ಥಳಕ್ಕೆ ಬಂದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಡಿಸೇಲ್ ನೀರೆಂದು ಹೇಳಿ ಅಸಡ್ಡೆಯ ಮಾತುಗಳನ್ನಾಡುತ್ತಾರೆ. ಈ ಹಿಂದೆ ಮಳೆ ಬಂದಾಗ ಕೆಮಿಕಲ್ ತ್ಯಾಜ್ಯ ನೀರು ಕೆರೆಗೆ ಸೇರಿದ ಪರಿಣಾಮ ಮೀನುಗಳು ಸೇರಿದಂತೆ ಜಾನುವಾರುಗಳು ಸಾವನ್ನಪ್ಪಿದವು, ಇಂತಹ ವಿಷಕಾರಿ ನೀರು ಬಿಡುತ್ತಿರುವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿದರು.

 

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಮಾಶಂಕರ್ ಮಾತನಾಡಿ, ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾಗ ಕೆಮಿಕಲ್ ನೀರೆಂದು ತಿಳಿದು ಬಂದಿದೆ, ಇದರ ಸ್ಯಾಂಪಲ್ ಸಂಗ್ರಹಿಸಲಾಗಿದ್ದು ಪ್ರಯೋಗಾಲಯಕ್ಕೆ ಕಳಿಸಲಾಗುವುದು, ಬರುವ ವರದಿ ಆಧಾರದ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮಾರಗಳನ್ನ ಅಳವಡಿಸಲಾಗುವುದು, ತ್ಯಾಜ್ಯ ವಸ್ತುಗಳನ್ನ ಬೇಕಾಬಿಟ್ಟಿ ಎಲ್ಲೆಂದರಲ್ಲಿ ಎಸೆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದರು.

 

Leave a Reply

Your email address will not be published. Required fields are marked *