
ಮಕ್ಕಳ ಹಕ್ಕುಗಳಿಗೆ ಧ್ವನಿಯಾಗಲು ಶಾಲಾ ಸಂಸತ್ ಸಹಕಾರಿ ಆಗಲಿದೆ ಎಂದು ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಪಿ.ಪ್ರಿಯಾಂಕ ತಿಳಿಸಿದರು.
ದೊಡ್ಡಬಳ್ಳಾಪುರ ನಗರದ ಎಂ.ಎ.ಬಿ.ಎಲ್ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯ ಪ್ರಕ್ರಿಯೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ಮಕ್ಕಳೇ ನಾಳಿನ ನಾಯಕರು. ಆದ್ದರಿಂದ ಮಕ್ಕಳಲ್ಲಿ ನಾಯಕತ್ವ ಗುಣ ಮತ್ತು ಜವಾಬ್ದಾರಿ ನಿರ್ವಹಣಾ ಸಾಮರ್ಥ್ಯವನ್ನು ಬೆಳೆಸುವುದು ಅಗತ್ಯವಾಗಿದೆ. ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಶಾಲಾ ಸಂಸತ್ತು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಶಾಲಾ ನಿರ್ವಹಣೆಯಲ್ಲಿ ಮಕ್ಕಳನ್ನು ಪಾಲುದಾರರನ್ನಾಗಿ ಮಾಡುವುದು ಶಾಲಾ ಸಂಸತ್ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ. ಶಾಲಾ ಆಡಳಿತದಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಮತ್ತು ಜವಾಬ್ದಾರಿಯ ನಿರ್ವಹಣೆಯ ಸರ್ಮಥವಾಗಿ ನಡೆಸಲು ಅನುಕೂಲವಾಗುತ್ತದೆ ಎಂದರು.
ಎಂ.ಎ.ಬಿ.ಎಲ್ ಪ್ರೌಢಶಾಲೆಯ ಶ ಮುಖ್ಯಶಿಕ್ಷಕ ಜಿ. ಸುರೇಶ್ ಮಾತನಾಡಿ, ಮಕ್ಕಳಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವುದು ಶಿಕ್ಷಣದ ಮೌಲ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ವೃದ್ದಿಸಲ್ಲಿ ಶಾಲಾ ಸಂಸತ್ತು ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಶಾಲಾ ಕಲಿಕೆಯ ಜೊತೆಗೆ ಪ್ರಜಾಪ್ರಭುತ್ವದ ಮೂಲಾಂಶಗಳನ್ನು ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ನಾಯಕರನ್ನು ದೇಶಕ್ಕೆ ಕಾಣಿಕೆಯಾಗಿ ನೀಡಬಹುದು. ಶಾಲೆಯ ಪ್ರತಿಯೊಂದು ಚಟುವಟಿಕೆ ಮತ್ತು ಕಾರ್ಯಕ್ರಮಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಅತ್ಯಂತ ಮಹತ್ವದ್ದು.ಮಕ್ಕಳಲ್ಲಿ ಐಕ್ಯತೆ, ಒಗ್ಗಟ್ಟು, ಸೋದರತ್ವ ಭಾವನೆ ಬೆಳಸಲು ಶಾಲಾ ಸಂಸತ್ತು ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಎಂ.ಎ.ಬಿ.ಎಲ್ ವಿದ್ಯಾಸಂಸ್ಥೆಯ ನಿರ್ದೇಶಕಿ ಎಂ. ಜಿ. ಪ್ರೀತಿ ಮತ್ತು ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು. ಶಿಕ್ಷಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.