ದೊಡ್ಡಬಳ್ಳಾಪುರ : ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಏಪ್ರಿಲ್ 21, 22 ಮತ್ತು 23 ರಂದು ಮೂರು ದಿನಗಳ ಶಿವ ಸಂಚಾರ ನಾಟಕೋತ್ಸವ ನಡೆಯಲಿದೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜು ತಿಳಿಸಿದರು .
ತಾಲ್ಲೂಕಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ಶಿವ ಸಂಚಾರ ನಾಟಕೋತ್ಸವ ಕುರಿತ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು ಹೊಸದುರ್ಗ ತಾಲ್ಲೂಕಿನ ಸಾಣೆಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಮೂರು ದಿನಗಳು ಪ್ರತಿ ದಿನ ಸಂಜೆ 6.30 ಗಂಟೆಗೆ ನಡೆಯುವ ನಾಟಕೋತ್ಸವದಲ್ಲಿ ಏ.21 ಮಂಗಳವಾರ ಜಂಗಮದೆಡೆಗೆ, ಏ.22 ರಂದು ಬುಧವಾರ ಕಳ್ಳರ ಸಂತೆ ಮತ್ತು ಏ.23 ಗುರುವಾರ ಶಿವಯೋಗಿ ಸಿದ್ದರಾಮೇಶ್ವರ ನಾಟಕಗಳು ಪ್ರದರ್ಶನಗೊಳ್ಳುತ್ತವೆ ಎಂದರು.
ಶಿವ ಸಂಚಾರ ಮೂರು ದಿನಗಳ ನಾಟಕೋತ್ಸವವು ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟೀಸ್ ಟ್ರಸ್ಟ್, ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಇವುಗಳ ಸಹಯೋಗದಲ್ಲಿ ನಡೆಯುತ್ತದೆ. ಸಾಣೇಹಳ್ಳಿ ಮಠದ ಶ್ರೀ ಶಿವಕುಮಾರ ಕಲಾ ಸಂಘ ಶಿವಸಂಚಾರ ಎಂಬ ರಂಗತಂಡದ ಮೂಲಕ ಪ್ರತಿ ವರ್ಷ ನಾಟಕೋತ್ಸವ ಸಾಣೇಹಳ್ಳಿ ಶಿವಕುಮಾರ ಬಯಲು ರಂಗಮಂದಿರದಲ್ಲಿ ನಡೆಯುತ್ತದೆ. ಪ್ರತಿ ವರ್ಷ ಮೂರು ನಾಟಕಗಳನ್ನು ಶಿವಸಂಚಾರ ನಾಟಕ ತಂಡ ರಾಜ್ಯದ ವಿವಿಧ ಸ್ಥಳಗಳಲ್ಲಿ ರಂಗಪ್ರದರ್ಶನ ಮಾಡುತ್ತಿದೆ ಎಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಜಂಗನದೆಡೆಗೆ ನಾಟಕವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ್ದಾರೆ. ಆರ್.ಜಗದೀಶ್ ಜಂಗಮದೆಡೆಗೆ ನಾಟಕಕ್ಕೆ ಸಂಗೀತ ಮತ್ತು ನಿರ್ದೇಶನ ಮಾಡಿದ್ದಾರೆ. ಈ ನಾಟಕ ಬಸವಣ್ಣನವರ ಬದುಕಿನ ಸುತ್ತ ನಡೆದ ಘಟನಾವಳಿಗಳ ಚಿತ್ರಣವಾಗಿದೆ. ಜಂಗಮದೆಡೆಗೆ ನಾಟಕವು ಬಸವಣ್ಣನವರ ಬಹುಮುಖಿ ಬದುಕಿಗೆ ಹಿಡಿದ ಕನ್ನಡಿಯಾಗಿದೆ.
ಕಳ್ಳರ ಸಂತೆ ನಾಟಕವು 15 ನೇ ಶತಮಾನದ ಕವಿ ವಿದ್ಯಾಪತಿಯ ಕಥೆಯಿಂದ ಪ್ರೇರಿತವಾಗಿದೆ. ವಿದ್ಯಾಪತಿಯ ಕಥೆಯನ್ನು ಆಧಾರಿಸಿ ಕೃಷ್ಣಮೂರ್ತಿ ಎನ್ ತಾಳಿಕಟ್ಟಿ ಅವರು ಕಳ್ಳರ ಸಂತೆ ನಾಟಕ ರಚನೆ, ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ಮನುಷ್ಯನ ಅನೀತಿಯ ನಡಾವಳಿಗಳನ್ನು ಕೆಲವು ಹಾಸ್ಯ ಸನ್ನಿವೇಶಗಳ ಮೂಲಕ ನಾಟಕವು ಸಾಂಕೇತಿಕವಾಗಿ ತೆರೆದಿಟ್ಟು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.
ಶಿವಯೋಗಿ ಸಿದ್ದರಾಮೇಶ್ವರ ನಾಟಕವನ್ನು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚಿಸಿದ್ದಾರೆ. ವೈ.ಡಿ.ಬದಾಮಿ ರಂಗ ನಿರ್ದೇಶನ ಮಾಡಿದ್ದಾರೆ. ಈ ನಾಟಕವು 12ನೇ ಶತಮಾನದ ವಚನಕಾರ, ಶಿವಯೋಗಿ ಸಿದ್ಧರಾಮೇಶ್ವರರ ಜೀವನ, ಕಾಯಕ ಮತ್ತು ಭಕ್ತಿ ಕುರಿತಾಗಿದೆ. ಸಿದ್ದರಾಮರ ಬದುಕಿನ ವಿವಿಧ ಆಯಾಯಗಳನ್ನು ಕಟ್ಟಿಕೊಡುತ್ತದೆ ಶಿವಯೋಗಿ ಸಿದ್ದರಾಮೇಶ್ವರ ನಾಟಕ. ಶಿವಶರಣರ ತತ್ವ ಸಿದ್ದಾಂತಗಳನ್ನು ರಂಗಭೂಮಿಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಜಂಗಮದೆಡೆಗೆ ಮತ್ತು ಶಿವಯೋಗಿ ಸಿದ್ದರಾಮೇಶ್ವರ ನಾಟಕಗಳಲ್ಲಿ ಇದೆ ಎಂದರು.
ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ದೊಡ್ಡಬಳ್ಳಾಪುರ ನಗರದಲ್ಲಿ ನಾಟಕಗಳ ಪ್ರದರ್ಶನ ಮತ್ತು ನಾಟಕೋತ್ಸವಗಳಿಗೆ
ವಿಶೇಷ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ. ಡಾ.ರಾಜ್ ಕುಮಾರ್ ಸೇರಿದಂತೆ ಪ್ರಖ್ಯಾತ ರಂಗಭೂಮಿ ಕಲಾವಿದರು ದೊಡ್ಡಬಳ್ಳಾಪುರದಲ್ಲಿ ನಾಟಕ ಪ್ರದರ್ಶನ ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಪೌರಾಣಿಕ ನಾಟಕಗಳು ನಿರಂತರವಾಗಿ ನಡೆಯುತ್ತದೆ. ರಂಗತಿರುಗಾಟ ತಂಡಗಳಾದ ನೀನಾಸಂ, ಸಮುದಾಯ, ರಂಗಾಯಣ ಮುಂತಾದ ಕಲಾತಂಡಗಳ ಕಲಾವಿದರು ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ. ಸದಾಭಿರುಚಿಯ ನಾಟಕಗಳಿಗೆ ದೊಡ್ಡಬಳ್ಳಾಪುರ ಕಲಾಭಿಮಾನಿಗಳು ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ ಎಸ್.ವಿ.ನಂಜುಂಡೇಶ್ವರ ಸ್ವಾಮಿ, ಅಧ್ಯಕ್ಷ ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎ.ಜಯರಾಮ್, ಮುಖ್ಯಶಿಕ್ಷಕಿ ನಿಖಿಲಾ ಮುಂತಾದವರು
