ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಹೋಬಳಿಯ 2100 ಎಕರೆ ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ, ಭೂಸ್ವಾಧೀನ ವಿರೋಧಿಸಿ ರೈತರು ಧರಣಿಗೆ ಮುಂದಾಗಿದ್ದು , ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮತ್ತು ತಪ್ಪು ಸರ್ವೇ ವರದಿ ನೀಡಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿ ಮಾಡಿ ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದ್ದಾರೆ.

ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ಚಿಕ್ಕಬೆಳವಂಗಲ, ಸೊನ್ನೇನಹಳ್ಳಿ, ರಾಂಪುರ, ನಾರನಹಳ್ಳಿ ಗ್ರಾಮಗಳ ಸುಮಾರು 2100 ಎಕರೆ ಫಲವತ್ತಾದ ಕೃಷಿ ಜಮೀನನ್ನು ಕರ್ನಾಟಕ ಇಂಡಸ್ಟ್ರಿಯಲ್ ಏರಿಯ ಡೆವಲಪೈಂಟ್ ಬೋರ್ಡ್ (ಕೆ.ಐ.ಎ.ಡಿ.ಬಿ.) ವತಿಯಿಂದ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಭೂಸ್ವಾಧೀನವಾಗುತ್ತಿರುವ ಭೂಮಿ ನೀರಾವರಿ ಜಮೀನಾಗಿದ್ದು, ಅಡಿಕೆ ಮತ್ತು ಬಾಳೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಜಮೀನನ್ನು ಸಮೀಕ್ಷೆ ಮಾಡಿದ ಅಧಿಕಾರಿಗಳು ಸರ್ವೇ ವರದಿಯ ಮಾಹಿತಿ ನೀಡುವಾಗ ಖಾಲಿ ಜಾಗ ಎಂದು ತಪ್ಪು ಮಾಹಿತಿಯನ್ನು ನೀಡಿದ್ದಾರೆ.ಈ ಭೂಮಿಗಳು ಸಾವಿರಾರು ರೈತರ ಜೀವನೋಪಾಯಕ್ಕೆ ಆಧಾರವಾಗಿದೆ, ಭೂಮಿ ಕಳೆದುಕೊಳ್ಳುವ ರೈತನ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ, ಸಾಮಾಜಿಕ ಹಾಗೂ ಆರ್ಥಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಭೂಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು ಪ್ರತಿಭಟನೆಗೆ ರೈತರು ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳೀಯ ರೈತರ ಹಿತದೃಷ್ಟಿಯಿಂದ ಹಾಗೂ ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸಿ, ಜಮೀನನ್ನು ಸಮೀಕ್ಷೆ ಮಾಡಿ ತಪ್ಪು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹಾಗೂ 2100-00 ಎಕರೆ ಕೃಷಿ ಭೂಮಿಯನ್ನು ಕೆ.ಐ.ಎ.ಡಿ.ಬಿ. ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಶಾಸಕ ಧೀರಜ್ ಮುನಿರಾಜು ಮನವಿ ಮಾಡಿದ್ದಾರೆ.
