*ದೊಡ್ಡಬಳ್ಳಾಪುರ*: ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಜೊತೆಗೆ ಸಾಮಾಜಿಕ, ಐತಿಹಾಸಿಕ ನಾಟಕಗಳ ಪ್ರದರ್ಶನಕ್ಕೂ ಉತ್ತೇಜನ ಅಗತ್ಯವಾಗಿದೆ. ಸಮಕಾಲೀನ ಆಶೋತ್ತರಗಳಿಗೆ ತಕ್ಕಂತೆ ನಾಟಕಗಳ ವಸ್ತು, ಅಭಿವ್ಯಕ್ತಿ ಮತ್ತು ಆಶಯಗಳಲ್ಲಿ ಮಾರ್ಪಾಟು ಮಾಡಿಕೊಳ್ಳುವುದು ಅಗತ್ಯ ಎಂದು ಬೆಂ.ಗ್ರಾ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಮುದ್ದನಾಯಕನಪಾಳ್ಯ ಬಳಿ ಇರುವ ಜಿಲ್ಲಾ ಕಲಾ ಭವನದಲ್ಲಿ ಶನಿವಾರ ನಡೆದ 50ನೇ ಮಾಸಿಕ ರಂಗ ಕಲಾಜ್ಯೋತಿ ಕಾರ್ಯಕ್ರಮ, ರಂಗಗೀತೆ ಗಾಯನ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೃಜನಶೀಲ ಅಭಿವ್ಯಕ್ತಿಯ ಪ್ರಖರ ಮಾಧ್ಯಮವಾಗಿರುವ ರಂಗ ಕಲೆ ಸಾಂಸ್ಕೃತಿಕ ಅನನ್ಯತೆಯ ಜೊತೆಗೆ ಸಮಕಾಲೀನ ಸಾಮಾಜಿಕ ವಾತಾವರಣವನ್ನು ವಿಮರ್ಶಿಸುವ ವೇದಿಕೆಯೂ ಆಗಬೇಕು. ಯುವ ಕಲಾವಿದರನ್ನು ಪ್ರೋತ್ಸಾಹಿಸಲು, ಕಲಾ ಪರಂಪರೆಯ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ಚಿಂತನೆಯನ್ನು ಉತ್ತೇಜಿಸಲು ಮಾರ್ಗದರ್ಶಿ ಶಿಬಿರಗಳನ್ನು ಹಮ್ಮಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಜಾಗತಿಕ ಸಂದಿಗ್ಧತೆಯ ಸಂದರ್ಭದಲ್ಲಿ ಲಲಿತ ಕಲೆಗಳು ಪ್ರಖರ ಅಭಿವ್ಯಕ್ತಿ ಮಾಧ್ಯಮವಾಗಿ ಗಮನ ಸೆಳೆದಿವೆ. ಇರಾನ್-ಅಮೆರಿಕಾ ಯುದ್ದದ ವೇಳೆ ಇರಾನ್‌ನ ಪ್ರಜೆಯೊಬ್ಬ ಸಂಗೀತ ವಾದ್ಯ ನುಡಿಸುವ ಮೂಲಕ ಸಾಮ್ರಾಜ್ಯಶಾಹಿಯ ದಬ್ಬಾಳಿಕೆಯನ್ನು ಪ್ರಶ್ನಿಸಿದ ಮತ್ತು ಶಾಂತಿ ಸ್ಥಾಪನೆಯ ಸಂದೇಶವನ್ನು ಸಾರಿದ ಘಟನೆ ಅತ್ಯಂತ ಮಾರ್ಮಿಕವಾಗಿದೆ. ಸಂಗೀತ, ಕಲೆಗಳಿಗೆ ರೋಗನಿರೋಧಕ ಸಾಮರ್ಥ್ಯವಿದ್ದು, ಮನಸ್ಸು ಹಾಗೂ ದೇಹವನ್ನು ಪ್ರಫುಲ್ಲಗೊಳಿಸುವ ಸಂವೇದನೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂ.ಗ್ರಾ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ರಂಗ ಕಲೆ ಸೃಜನಶೀಲ ಭಾವನೆಗಳ ಅಭಿವ್ಯಕ್ತಿಯ ಜೊತೆಗೆ ಸಾಂಸ್ಕೃತಿಕ ಹಾಗೂ ಪಾರಂಪರಿಕ ಮೌಲ್ಯಗಳ ಬಗ್ಗೆ ನಿರಂತರ ಜಾಗೃತಿಯನ್ನು ಮೂಡಿಸುತ್ತದೆ. ಸತತ 50 ತಿಂಗಳುಗಳಿಂದ ಪ್ರತಿ ತಿಂಗಳು ಒಬ್ಬೊಬ್ಬ ಕಲಾವಿದರನ್ನು ಗುರ್ತಿಸಿ ಗೌರವಿಸುವ ಪ್ರಕ್ರಿಯೆ ನಡೆಯುತ್ತಿದೆ. ಕಲಾ ಚೇತನಗಳ ಉತ್ತೇಜನಕ್ಕೆ ಇದೊಂದು ಉತ್ತಮ ಮಾರ್ಗವೂ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಮಾತನಾಡಿ, ಇಡೀ ಜಿಲ್ಲೆಯ ಅಸಂಖ್ಯಾತ ಕಲಾವಿದರುಗಳನ್ನು ಗುರ್ತಿಸಿ, ಪ್ರೋತ್ಸಾಹಿಸುವುದು ರಂಗ ಕಲಾ ಜ್ಯೋತಿ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ರಂಗ ಕಲಾಜ್ಯೋತಿ 50 ಮಾಸಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು.
ಕಲಾವಿದ ನಾರಾಯಣಸ್ವಾಮಿ ಅವರಿಗೆ ರಂಗ ಕಲಾ ಜ್ಯೋತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಂಘದ ಉಪಾಧ್ಯಕ್ಷ ಎಸ್.ಎ.ಶ್ರೀಧರಗೌಡ, ಖಜಾಂಚಿ ಆರ್.ವಿ.ಮಂಜುನಾಥ್, ನಿರ್ದೇಶಕರಾದ ಮುನಿರಾಜು, ಕೆ.ನಾಗರತ್ನಮ್ಮ, ಆರ್.ಎ.ಸಂಜೀವರಾಯಪ್ಪ, ಮುನಿಕೃಷ್ಣಪ್ಪ, ಸುಬ್ರಹ್ಮಣ್ಯಾಚಾರ್, ಚಂದ್ರಣ್ಣ, ಸರ್ವೇಶ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಲಹಾ ಸಮಿತಿ, ಸಂಚಾಲನಾ ಸಮಿತಿಯ ಸದಸ್ಯರು ಪಾಲ್ಗೊಂಡರು.
ದೊಡ್ಡಬಳ್ಳಾಪುರದ ಮುದ್ದನಾಯಕನಪಾಳ್ಯದ ಬೆಂ.ಗ್ರಾ ಜಿಲ್ಲಾ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ನರಸಿಂಹಮೂರ್ತಿ ಅವರಿಗೆ ರಂಗ ಕಲಾಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
