ದೊಡ್ಡಬಳ್ಳಾಪುರ :ಗ್ರಾಮ ಪಂಚಾಯತ್ ನೌಕರರಿಗೆ ಪ್ರಮುಖವಾಗಿರುವ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ಸರ್ಕಾರ ನೀಡಿದ ಭರವಸೆ ಇನ್ನೂ ಸಾಕಾರವಾಗಿಲ್ಲ. ಭರವಸೆ ಕೊಟ್ಟು 3 ತಿಂಗಳು ಗತಿಸಿದರೂ ಕ್ರಮಕ್ಕೆ ಮುಂದಾಗದ ಇಲಾಖೆಯ ವಿಳಂಬ ನೀತಿಯನ್ನು ಪ್ರತಿಭಟಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ್ ಕಚೇರಿಗಳ ಮುಂದೆ ಹೋರಾಟ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಈ ಮೂಲಕ ಒತ್ತಾಯಿಸಿದ್ದೇವೆ ಎಂದು ರಾಜ್ಯ ಪಂಚಾಯತಿ ನೌಕರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಟಿ ಎಂ ನಟರಾಜು ತಿಳಿಸಿದರು.
ನಗರದ ಸಿ ಐ ಟಿ ಯು ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ಸಚಿವರು ಭರವಸೆ ಕೊಟ್ಟು 3 ತಿಂಗಳು ಕಳೆದಿದೆ.ಈ 3 ತಿಂಗಳಲ್ಲಿ 2-3 ಬಾರಿ ಮಾತುಕತೆ ನಡೆಸಿದ್ದರೂ 19 ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಪ್ರಮುಖವಾಗಿರುವ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ಮಾನ್ಯ ಸಚಿವರು ನೀಡಿದ ಭರವಸೆ ಸಾಕಾರವಾಗಿಲ್ಲ. ಇಲ್ಲಿವರೆಗೆ ಒಂದೇ ಒಂದು ಬೇಡಿಕೆ ಈಡೇರಿಸದೇ ಇರುವುದು ವಿಷಾದನೀಯ ಎಂದರು.
ಗ್ರಾಮ ಪಂಚಾಯತ್ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಡಿಸೆಂಬರ್ 20, 2025 ರಿಂದ ಬೆಂಗಳೂರಿನ ಪ್ರೀಢಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಗ್ರಾಮ ಪಂಚಾಯತ ನೌಕರರು ಸರ್ಕಾರದ ಗಮನವನ್ನು ಸೆಳೆದಿದ್ದರು. ಡಿಸಂಬರ್ 22 ರಂದು ಸಂಘಟನೆಯ ಮುಖಂಡರನ್ನು ಸಭೆ ಕರೆದು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿ ಸರ್ಕಾರದ ಹಂತದಲ್ಲಿರುವ (ಪಾಲಿಸಿ ಮ್ಯಾಟರ್) ಬೇಡಿಕೆಗಳನ್ನು ಸಚಿವರ ಜೊತೆ ಸಭೆಯನ್ನು ನಡೆಸಿ ಅವರಿಗೆ ಮನವರಿಕೆ ಮಾಡಿಕೊಟ್ಟು ಉಳಿದ 7 ಪ್ರಮುಖ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸಿ ಆದೇಶವನ್ನು ನೀಡಲಾಗುವುದೆಂದು ಧರಣಿ ನಿರತ ಸ್ಥಳಕ್ಕೆ ಬಂದು ಭರವಸೆಯನ್ನು ಕೊಟ್ಟಿದ್ದು ಈ ವರೆಗೂ ಯಾವುದೇ ಬೇಡಿಕೆ ಈಡೇರಿಲ್ಲ.
ಈ ಕಾರಣ ಇಡೀ ರಾಜ್ಯದ ಪಂಚಾಯತ್ ನೌಕರರು ಅಸಮಾಧಾನಗೊಂಡು ಇಲಾಖೆಯ ವಿಳಂಬ ನೀತಿಯನ್ನು ಪ್ರತಿಭಟಿಸಿ ದ ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತ ಕಚೇರಿಗಳ ಮುಂದೆ ಹೋರಾಟ ನಡೆಸುವ ಮೂಲಕ ಸಂಕೇತಿಕವಾಗಿ ನಮ್ಮ ಮನವಿ ತಿಳಿಸಿದ್ದೇವೆ ಈ ಮನವಿಗೂ ತಾವು ಸ್ಪಂದಿಸದಿದ್ದರೆ ಮುಂದೆ ನಮ್ಮ ಹೋರಾಟ ಬೃಹತ್ ಪ್ರಮಾಣದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು , ಈ ಹೋರಾಟದಲ್ಲಿ ಏನಾದರೂ ಅನಾಹುತಗಳಾದರೆ ಇದಕ್ಕೆ ನೇರವಾಗಿ ಆರ್‌ಡಿಪಿಆರ್ ಇಲಾಖೆಯೆ ಹೊಣೆ ಆಗುತ್ತದೆ. ದಯವಿಟ್ಟು ಇದಕ್ಕೆ ಆಸ್ಪದ ನೀಡದೇ ಕೂಡಲೆ ತಾವೇ ಒಪ್ಪಿಕೊಂಡ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.
ಪ್ರಮುಖ ಬೇಡಿಕೆಗಳು:-
*ತಾವೇ ಒಪ್ಪಿಕೊಂಡಿರುವ ಪ್ರಕಾರ ರೂ.5000 ಎಲ್ಲಾ ನೌಕರರಿಗೆ ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು.
* ನೌಕರರು ನಿವೃತ್ತಿ/ನಿಧನ ಹೊಂದಿದರೆ ಅವರಿಗೆ ಇಡಗಂಟು ರೂ.6 ಲಕ್ಷ ನೀಡಬೇಕು.
* ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು.
*ತಾವು ಭರವಸೆ ನೀಡಿದ ಭಾಗವಾಗಿ ಸ್ವಚ್ಛವಾಹಿನಿ ನೌಕರರ ಸಭೆಯನ್ನು ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು.
*ಪ್ರತಿಯೊಂದು ಪಂಚಾಯತಿಗೆ ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬುವುದು.
*ಕಳೆದ 18-20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು.
*2ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು.
*ಈಗಾಗಲೆ ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳಿಸಿದ್ದೀರಿ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಿದ್ದೀರಿ. ಆದರೆ ಈ ಫಾರ್ಮೆಟ್‌ನಲ್ಲಿ ಪಂಚಾಯತ್ ನೌಕರರೆಂದು ಮಾಹಿತಿ ಇಲ್ಲಾ ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು.

ಈ ವೇಳೆ ಬೆಂಗಳೂರು ಗ್ರಾಮಾಂತರ ಸಿ ಐ ಟಿ ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಎ ವೆಂಕಟೇಶ್ , ಸಿ ಐ ಟಿ ಯು ರಾಜ್ಯ ಉಪಾಧ್ಯಕ್ಷ ಗೋಪಾಲ ಕೃಷ್ಣ ಹರಳಹಳ್ಳಿ, ಪಂಚಾಯತಿ ನೌಕರ ಸಂಘದ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ್, ಪಂಚಾಯತಿ ನೌಕರ ಸಂಘದ ಜಿಲ್ಲಾಧ್ಯಕ್ಷ ಟಿ ಎಂ ನಟರಾಜು ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
