ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ನಡೆ ವಿರೋಧಿಸಿ ಜೆಡಿಎಸ್ ಪ್ರತಿಭಟನೆ

Spread the love

ದೊಡ್ಡಬಳ್ಳಾಪುರ : ದೇಶದ ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಲು ಅವಕಾಶ ಕೊಡದ ಕಾಂಗ್ರೆಸ್ ಮಹಿಳಾ ವಿರೋಧಿ ಎಂಬುದು ಸಾಬೀತು ಮಾಡಿಕೊಂಡಿದೆ ಎಂದು ಬೆಂಗಳೂರು ಗ್ರಾಮಾಂತರ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಾಗೂ ತಾಲೂಕು ಜೆಡಿಎಸ್ ಕಾರ್ಯಕರ್ತರು ಬುಧವಾರ (ಎ. 22) ನಗರದ ತಾಲೂಕು ಕಚೇರಿ ವೃತ್ತದಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಯನ್ನು ವಿರೋಧಿಸಿರುವ ಕಾಂಗ್ರೆಸ್ ನಡೆ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು ಯಾವುದೇ ಮಸೂದೆ ಕೇಂದ್ರದಲ್ಲಿ ಜಾರಿಯಾಗಬೇಕಾದರೆ ಬಹುಮತದ ಅವಶ್ಯಕತೆ ಇರುತ್ತದೆ. ಈ ಬಾರಿ ಮಹಿಳಾ ಸಬಲೀಕರಣಕ್ಕೆ ಹಾಗೂ ಸಮಾನತೆಗೆ ಪ್ರತೀಕವಾದ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸುವಲ್ಲಿ ಕೇಂದ್ರದ ಎನ್ ಡಿಎ ಸರಕಾರ ಮುಂದಾಗಿದೆ ಆದರೆ ಈ ಮಸೂದೆ ಜಾರಿಯಾಗದಂತೆ ಬಹುಮತ ಸೂಚಿಸದ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷದ ನಡೆ ದೇಶದ ಮಹಿಳೆಯರಿಗೆ ಮಾಡಿದ ಅವಮಾನ ಎಂದರು.

Ad

ಮಾನವ ಸರಪಳಿ ಹಾಗೂ ಕಾಲ್ನಡಿಗೆ ಜಾಥಾ :

ಜೆಡಿಎಸ್ ಕಾರ್ಯಕರ್ತರು ಹಾಗೂ ಪ್ರಮುಖರು ನಗರದ ತಾಲೂಕು ಕಚೇರಿ ವೃತದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು ಹಾಗೂ ಪಕ್ಷದ ಜಿಲ್ಲಾ ವರಿಷ್ಠರು ಹಾಗೂ ತಾಲೂಕು ವರಿಷ್ಠರ ಜತೆಗೂಡಿ ಕಾಲ್ನಡಿಗೆ ಜಾಥಾ ಮೂಲಕ ತಾಲೂಕು ಕಚೇರಿಗೆ ತಲುಪಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

 

ಕಳೆದ 30 ವರ್ಷಗಳಲ್ಲಿ ಯಾವುದೇ ಸರಕಾರ ಕೈಗೊಳ್ಳದ ವಿಶೇಷ ಮಸೂದೆಯನ್ನು ಎನ್ ಡಿ ಎ ಸರಕಾರ ಮಾಡಲು ಮುಂದಾಗಿದೆ. ಇಂತಹ ಸಮಯದಲ್ಲಿ ಪಕ್ಷಾತೀತವಾಗಿ ಬಹುಮತ ಸೂಚಿಸಬೇಕಿತ್ತು ಆದರೆ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರ ಸರಿ ಇಲ್ಲ. ಮಹಿಳೆಯರ ಹಕ್ಕನ್ನು ಕುಸಿದುಕೊಳ್ಳುವ ಪ್ರಯತ್ನ ಮಾಡಿದೆ. ಮಹಿಳಾ ವಿರೋಧಿ ಕಾಂಗ್ರೆಸ್ ನ್ನು ಖಂಡಿಸಿ ಇಂದು ತಾಲೂಕಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ ಎಂದರು .

 

 

ತಾಲೂಕು ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ ಮಹಿಳೆಯರು ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಹಕ್ಕನ್ನು ಪ್ರತಿಪಾದನೆ ಮಾಡಲು ಈ ಮಸೂದೆಯು ಸಹಕಾರಿಯಾಗಿದೆ.ಅಲ್ಲದೆ ಮೀಸಲಾತಿ ಮೂಲಕ ಹಲವಾರು ಪ್ರತಿಭಾನ್ವಿತ ಹೆಣ್ಣು ಮಕ್ಕಳು ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆದರೆ ಇಂತಹ ಉತ್ತಮ ಮಸೂದೆಯನ್ನು ಕಾಂಗ್ರೆಸ್ ಒಪ್ಪದೇ ಇರುವುದು ವಿಪರ್ಯಾಸ . ಕೇವಲ ಮತ ಪಡೆಯಲು ನಾವು ಮಹಿಳೆಯರ ಪರ ಎಂದು ಹೇಳುವ ಕಾಂಗ್ರೆಸ್ ಇಂದು ದೇಶದ ಮಹಿಳೆಯರಿಗೆ ಅನುಕೂಲವಾಗುವ ಮಸೂದೆಯನ್ನೇ ಜಾರಿ ಮಾಡಲು ಬಿಟ್ಟಿಲ್ಲ, ಇದರಿಂದ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಎಂಥದ್ದು ಎಂಬುದು ತಿಳಿಯುತ್ತದೆ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತುಕೊಳ್ಳಲಿ ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗುವ ಈ ಮಸೂದೆಯನ್ನು ಜಾರಿಯಾಗಲು ಸಹಕರಿಸಲಿ ಎಂಬುದೇ ನಮ್ಮ ಉದ್ದೇಶ ಎಂದರು.

ಕಾಂಗ್ರೆಸ್ ಮಹಿಳಾ ನಾಯಕರು ಮಾತನಾಡುತ್ತಿಲ್ಲ ಏಕೆ..??

ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ಮಹಿಳಾ ಮುಖಂಡರು ಮಾತನಾಡಿ ಮಹಿಳೆಯರು ಕೇವಲ ಬಿಜೆಪಿ ಜೆಡಿಎಸ್ ಪಕ್ಷಗಳಲ್ಲಿ ಮಾತ್ರ ಎಂದು ಕಾಂಗ್ರೆಸ್ ಭಾವಿಸಿದಂತಿದೆ.ಮೀಸಲಾತಿಯಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬುದನ್ನು ಕಾಂಗ್ರೆಸ್ ಅರಿಯಬೇಕು. ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಪಡೆದಿರುವ ಮಹಿಳಾ ನಾಯಕರು ಈ ಕುರಿತು ಮಾತನಾಡದೆ ಇರುವುದು ಮಹಿಳೆಯರಿಗೆ ಮಾಡುತ್ತಿರುವ ಅವಮಾನ ದೇಶದಲ್ಲಿ ಸಾಕಷ್ಟು ಪ್ರತಿಭಾನ್ವಿತ ಹೆಣ್ಣು ಮಕ್ಕಳಿದ್ದಾರೆ ಅವಕಾಶ ಸಿಕ್ಕಿದರೆ ತಾನೇ ಬೆಳೆಯೋದು…??  ಕೇಂದ್ರದ ಎನ್ ಡಿಎ ಸರ್ಕಾರ ಮಹಿಳಾ ಮೀಸಲಾತಿ ಮಸೂದೆ ಮೂಲಕ ದೇಶದ ಹೆಣ್ಣು ಮಕ್ಕಳಿಗೆ ವಿಶೇಷ ಅವಕಾಶ ಕಲ್ಪಿಸಲು ಮುಂದಾಗಿದೆ ಕಾಂಗ್ರೆಸ್  ತನ್ನ ಕುತಂತ್ರ ಬುದ್ಧಿಯನ್ನು ಬಿಟ್ಟು ಮಸೂದೆಯನ್ನು ಬೆಂಬಲಿಸುವ ಮೂಲಕ ದೇಶದ ಮಹಿಳೆಯರ ಪರವಾಗಿ ನಿಲ್ಲಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

 

Ad

ಜೆಡಿಎಸ್ ಪಕ್ಷದ ರಾಷ್ಟ್ರೀಯ ವರಿಷ್ಠರಾದ ಎಚ್ ಡಿ ದೇವೇಗೌಡ ರವರು ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮ ಅನುಭವದ ಧಾರೆಎರೆದಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ರೂಪಿಸಿರುವ ಅತ್ಯುತ್ತಮ ಮಸೂದೆ ಇದಾಗಿದ್ದು ಈ ಮಸೂದೆ ಕೂಡಲೇ ಜಾರಿಯಾಗಬೇಕು. ಈ ಮಸೂದೆ ಜಾರಿಯಾದರೆ ದೇಶದಲ್ಲಿ ಸಾಕಷ್ಟು ಹೆಣ್ಣುಮಕ್ಕಳಿಗೆ ಅನುಕೂಲವಾಗಲಿದೆ ಎಂದರು.

 

 

ಈ ವೇಳೆ ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ವಿಜಯಕುಮಾರ್ , ನಗರಸಭಾ ಸದಸ್ಯ ತ.ನ ಪ್ರಭುದೇವ್,ಜೆಡಿಎಸ್ ಮಹಿಳಾ ಘಟಕದ ಮುಖಂಡರಾದ ದೇವರಾಜಮ್ಮ , ಪ್ರಭಾ ನಾಗರಾಜ್ , ಜೆಡಿಎಸ್ ಮುಖಂಡರಾದ ಕೆಂಪರಾಜು, ಅಂಜನ್‌ಗೌಡ,ನಾಗರಾಜು, ತಳಗವಾರ ನಾಗರಾಜ್ ಆಶಾಗೌಡ, ಪ್ರವೀಣ್(ಶಾಂತಿನಗರ), ಶಿವಕುಮಾರ್( ವೈರ್ )ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *

© 2026 Malnad TV. All Rights Reserved.