ಬಿ.ಆರ್.ಅಂಬೇಡ್ಕರ್ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ಸಂವಿಧಾನವನ್ನು ರೂಪಿಸಿದರು – ತ.ನ.ಪ್ರಭುದೇವ್

Spread the love

ದೊಡ್ಡಬಳ್ಳಾಪುರ :  ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ  ಕನ್ನಡ ಜಾಗೃತ ಭವನದಲ್ಲಿ ‌ನಡೆಯಿತು.

 

ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜೀವನ ಮತ್ತು ಸಾಧನೆ  ಕುರಿತು ಮಾತನಾಡಿದ ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್, ಅಂಬೇಡ್ಕರ್ ಅವರ ಆದರ್ಶ ತತ್ವಗಳು ಯುವಕರಿಗೆ ಮಾದರಿಯಾಗಬೇಕು. ದಲಿತರ ಹಕ್ಕುಗಳಿಗಾಗಿ, ಮಹಿಳಾ ಸಬಲೀಕರಣ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಅವರು ಶ್ರಮಿಸಿದ ಡಾ.ಬಿ.ಆರ್.ಅಂಬೇಡ್ಕರ್ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಆಧಾರದ ಮೇಲೆ ಸಂವಿಧಾನವನ್ನು ರೂಪಿಸಿದರು ಎಂದರು.

 

ಜನಪ್ರಿಯ  ವಿಜ್ಞಾನ ಸಾಹಿತಿ ಡಾ.ಎ.ಓ.ಆವಲಮೂರ್ತಿ ಮಾತನಾಡಿ,ಅಂಬೇಡ್ಕರ್ ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ; ಅವರು ಇಡೀ ದೇಶದ ಅಭಿವೃದ್ಧಿಯನ್ನು ಬಯಸಿದ್ದ ರಾಷ್ಟ್ರನಿರ್ಮಾಣಕಾರರು. ಅವರ ಆಶಯಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತರುವ ಮೂಲಕ ಮಾತ್ರ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸಲು ಸಾಧ್ಯ. ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕಾಗಿದೆ ಎಂದರು.

 

ಕನ್ನಡ ಪಕ್ಷದ ಮುಖಂಡ  ಸಂಜೀವನಾಯಕ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ  ಬದುಕು ಮತ್ತು ಬರಹಗಳನ್ನು  ಅರ್ಥ ಮಾಡಿಕೊಂಡಾಗ ಮಾತ್ರ ಜಾತಿ ಪದ್ಧತಿಯ ನಿರ್ಮೂಲನೆ, ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯಲು ಸಾಧ್ಯವೆಂದರು.

 

ಕಾರ್ಯಕ್ರಮದಲ್ಲಿ  ಕನ್ನಡಪರ ಹೋರಾಟಗಾರ ಗುರುರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ತಾಲ್ಲೂಕು ಅಧ್ಯಕ್ಷ     ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾ ಮಹಾದೇವ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಜಾಗೃತ ಪರಿಷತ್ತು ಅಧ್ಯಕ್ಷ ಕೆ.ವೆಂಕಟೇಶ್, ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಯ್ಯ, ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್ ಸೇರಿದಂತೆ ವಿವಿಧ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.