ದೊಡ್ಡಬಳ್ಳಾಪುರ : ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಬಸವಣ್ಣ.ಸಕಲ ಜೀವಾತ್ಮರಿಗೆ ಲೇಸು ಬಯಸುವುದು ಅವರ ಜೀವನದ ಮುಖ್ಯ ತತ್ವವಾಗಿತ್ತು ಎಂದು ಕನ್ನಡ ಜಾಗೃತ ಪರಿಷತ್ತು ಟ್ರಸ್ಟಿ ಎಸ್.ಮಹಾಬಲೇಶ್ವರ್ ತಿಳಿಸಿದರು.
Ad
ಅವರು ದೊಡ್ಡಬಳ್ಳಾಪುರ ನಗರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ಸಹಯೋಗದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾನತೆ ಮತ್ತು ಮಾನವೀಯತೆಯನ್ನು ಬಸವಣ್ಣನವರು ಪ್ರತಿಪಾದಿಸುತ್ತಾ, ಜಾತಿ, ಲಿಂಗ ತಾರತಮ್ಯವಿಲ್ಲದೆ ಎಲ್ಲರೂ ಸಮಾನರು ಎಂಬ ತತ್ವವನ ಪ್ರತಿಪಾದಿಸಿದರು. ನಡೆ-ನುಡಿ ಒಂದೇ ಆಗಿರಬೇಕೆಂದು ಪ್ರತಿಪಾದಿಸಿದರು. ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಮೌಲ್ಯಾಧಾರಿತ ದಾರ್ಶನಿಕ, ಮಧ್ಯಯುಗದ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದರು.
ಕನ್ನಡಪರ ಹಿರಿಯ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೆ ಮೂಲಭೂತ ಸೌಕರ್ಯಗಳು ಎಲ್ಲಾ ಜನಸಾಮಾನ್ಯರಿಗೆ ಸಮಾನವಾಗಿ ಸಿಗಬೇಕೆಂಬುದಾಗಿತ್ತು. ಕಾಯಕ ನಿಷ್ಠೆ, ಮಾನವೀಯತೆಯ ಮೌಲ್ಯಗಳು ಸರ್ವ ಜನಾಂಗದ ಧ್ವನಿಯಾಗಬೇಕು. ಬಸವಣ್ಣನವರ ವಿಚಾರಗಳು ಸರ್ವಕಾಲಕ್ಕೂ ಸತ್ಯ ಮತ್ತು ಮಾನವತಾವಾದದ ದಾರಿದೀಪಗಳಾಗಿವೆ ಎಂದರು.
ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ ಸಮಾಜ ಸುಧಾರಕ, ತತ್ವಜ್ಞಾನಿ ಮತ್ತು ವಚನಕಾರ ಬಸವಣ್ಣನವರು ಜನಪರ ಕಾಳಜಿಯ ಸಾಕಾರ ಮೂರ್ತಿಯಾಗಿದ್ದರು. ಅವರ ವಿಚಾರಗಳು, ಕಾಯಕ ಮತ್ತು ದಾಸೋಹ ತತ್ವಗಳು ಸಮಾಜದ ಕೆಳವರ್ಗದ ಜನರ ಏಳಿಗೆಗೆ, ಸಮಾನತೆಗೆ ದಾರಿ ದೀಪವಾಗಿವೆ ಎಂದರು.
Ad
ಕನ್ನಡ ಜಾಗೃತ ಸಮಿತಿ ಸದಸ್ಯ ಕೆ.ಮಹಾಲಿಂಗಯ್ಯ ಮಾತನಾಡಿ, ಬಸವಣ್ಣ ಮತ್ತು ವಚನಕಾರರು ಸರಳ, ಜನಸಾಮಾನ್ಯರ ಭಾಷೆ ವಚನಗಳನ್ನು ರಚಿಸಿದವರು. ವಚನ ಸಾಹಿತ್ಯ ವಿಶ್ವ ಸಾಹಿತ್ಯ ಕನ್ನಡದ ಕೊಡುಗೆಯಾಗಿದೆ. ವಚನಕಾರರ ಸಾಹಿತ್ಯ ಮತ್ತು ಅವರ ಬದುಕು ಎಂದಿಗೂ ಆದರ್ಶವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಕೋಶಾಧ್ಯಕ್ಷ ಜಿ.ಸುರೇಶ್, ಕನ್ನಡ ಜಾಗೃತ ಪರಿಷತ್ತು ಕೆ.ವೆಂಕಟೇಶ್ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಪಕ್ಷದ ಜಿಲ್ಲಾಧ್ಯಕ್ಷ ಮುನಿಪಾಪಣ್ಣ, ತಾಲ್ಲೂಕು ಅಧ್ಯಕ್ಷ ಡಿ.ವೆಂಕಟೇಶ್, ವಿವಿಧ ಕನ್ನಡಪರ ಸಂಘಟನೆಗಳ. ಪದಾಧಿಕಾರಿಗಳಾದ ವೆಂಕಟರಾಜು, ಮಂಜುನಾಥ್, ಜಿ.ಸುರೇಶ್, ಅಣ್ಣಯ್ಯ, ಚೌಡರಾಜ್, ಪರಮೇಶ್, ಸಫೀರ್, ಶ್ರೀನಿವಾಸ್, ಸೂರ್ಯನಾರಾಯಣ ಮುಂತಾದವರು ಭಾಗವಹಿಸಿದ್ದರು.
