ದೊಡ್ಡಬಳ್ಳಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ಪರವಾನಗಿ ಭೂ ಮಾಪಕರು ಎರಡು ತಿಂಗಳಿಂದ ಮುಷ್ಕರ ಹೂಡಿರುವುದರಿಂದ ಭೂ ಮಾಪನ ಇಲಾಖೆಯ ಎಲ್ಲ ಕೆಲಸಗಳು ಸ್ಥಗಿತಗೊಂಡಿದೆ. ಇದರಿಂದಾಗಿ ಭೂ ಮಾಪನ ಕಚೇರಿ ಸ್ತಬ್ಧವಾಗಿದೆ. ಭೂ ಸರ್ವೆ, ಹದ್ದುಬಸ್ತ್, ಪೋಡಿ ಸೇರಿದಂತೆ ಇತರೆ ಕೆಲಸಗಳಿಗೆ ಸಲ್ಲಿಕೆಯಾಗಿರುವ ಎರಡು ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇ ಆಗದೇ ಉಳಿದಿವೆ ಎಂದು ಕೆಸ್ತೂರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ರಮೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿರುವ ಸೋಮವಾರ ಭೂ ಮಾಪನ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಅವರು ಮಾತನಾಡಿದರು. ರೈತರ ಜಮೀನು ಮಾರಾಟ, ಹಕ್ಕು ಬದಲಾವಣೆ ಎಲ್ಲ ಕೆಲಸಗಳಿಗೂ ತೊಡಕು ಉಂಟಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಅವರನ್ನು ಕೆಲಸಕ್ಕೆ ನಿಯೋಜಿಸಬೇಕು, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಎರಡು ತಿಂಗಳಿಂದ ಭೂ ಮಾಪನ ಇಲಾಖೆಯಲ್ಲಿ ಜಮೀನು ಸರ್ವೆ, ಹದ್ದು ಬಸ್ತ್ , 11ಇ, ಪೋಡಿ, ದಾರಿ ನಕ್ಷೆಯ ಅರ್ಜಿಗಳು ಅರ್ಜಿ ವಿಲೇವಾರಿಯಾಗುತ್ತಿಲ್ಲ. ರೈತರ ಪಾಲಿಗೆ ಈ ಇಲಾಖೆ ಸತ್ತು ಹೋಗಿದೆ. ರೈತರ ಸಮಸ್ಯೆ ಯಾರೂ ಆಲಿಸುತ್ತಿಲ್ಲ. ಸರ್ವೆ ಇಲಾಖೆಯ ಈ ಸಮಸ್ಯೆಯಿಂದ ಜಮೀನುಗಳ ಮಾರಾಟ ಪ್ರಕ್ರಿಯೆ ನಡೆಯುತ್ತಿಲ್ಲ. ನಮ್ಮ ತಾಲ್ಲೂಕಿನಲ್ಲಿ 2000 ಸಾವಿರಕ್ಕೂ ಅಧಿಕ ಅರ್ಜಿಗಳ ವಿಲೇವಾರಿಯಾಗಬೇಕಿದೆ. ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ವೆಚ್ಚ, ಮದುವೆ ಕಾರ್ಯಗಳಿಗೆ ಹಣ ಹೊಂದಿಸುವುದು ಕಷ್ಟವಾಗಿದೆ. ಸರ್ಕಾರ ಕೂಡಲೇ ಭೂ ಮಾಪಕರ ಬೇಡಿಕೆ ಈಡೇರಿಸಿ ಭೂ ಸರ್ವೆ ಕಾರ್ಯಗಳನ್ನು ಮಾಡಿಸಬೇಕು ಎಂದು ರಮೇಶ್ ಗೌಡ ಒತ್ತಾಯಿಸಿದರು.
ಈ ಕುರಿತು ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೆಶಕ ಮೋಹನ್ ಕುಮಾರ್ ಮಾತನಾಡಿ ಬೇಸಿಗೆ ಆಗಿರುವುದರಿಂದ ರೈತರು ಬೆಳೆಗಳನ್ನ ಕಟಾವು ಮಾಡಿರುತ್ತಾರೆ. ಇದೀಗ ಜಮೀನುಗಳ ವ್ಯಾಪಾರ, ಕುಟುಂಬದಲ್ಲಿ ಆಸ್ತಿಗಳ ವಿಂಗಡಣೆ ಸೇರಿಸಂತೆ ಹಲವು ಕೆಲಸಗಳು ನಡೆಯುವ ಸಮಯವಾಗಿದೆ. ತಾಲ್ಲೂಕಿನಲ್ಲಿ ಸರ್ವೇ ಬಾಕಿ ಇರುವ ಅರ್ಜಿಗಳು 590, ಹದ್ದು ಬಸ್ತ್ , 11ಇ, ಪೋಡಿ, ದಾರಿ ನಕ್ಷೆಯ 1863ಅರ್ಜಿಗಳು ವಿಲೇವಾರಿಯಾಗದೆ ನಿಂತಿವೆ. ಪರವಾನಗಿ ಪಡೆದ ಭೂ ಮಾಪಕರ ಪ್ರತಿಭಟನೆಯಿಂದಾಗಿ ಸಾಕಷ್ಟು ಅನಾನುಕೂಲಗಳಾಗಿವೆ. ನಮ್ಮ ಇಲಾಖೆಯ ಆಯುಕ್ತರಿಂದ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದಿದ್ದಾರೆ.
ಈ ವೇಳೆ ಕೆಸ್ತೂರು ರಮೇಶ್ ಗೌಡ,ನಾಗರಾಜು, ಶಶಿಕುಮಾರ್, ಉಮೇಶ್, ಶಿವಕುಮಾರ್ ಮತ್ತಿತ್ತರರು ಹಾಜರಿದ್ದರು.
