ದೊಡ್ಡಬಳ್ಳಾಪುರ : ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜನ ಸಾಮಾನ್ಯರ ಅನುಕೂಲಕ್ಕಾಗಿ ‘ಮಾಂಗಲ್ಯ ಭಾಗ್ಯ’ ಎಂಬ ಯೋಜನೆಯ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನ ಇಂದು(ಜ. 31) ಬೆಳಗ್ಗೆ 11:20 ರಿಂದ 12:20ರವರೆಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ನೆಡೆಸಲಾಯಿತು

‘ ಮಾಂಗಲ್ಯ ಭಾಗ್ಯ ‘ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಹಿರಿಯರ ಆಶೀರ್ವಾದದೊಂದಿಗೆ ಒಟ್ಟು 13 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ದೇವಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ. ನಾಗರಾಜ್ ಮಾತನಾಡಿ ‘ಮಾಂಗಲ್ಯ ಭಾಗ್ಯ’ ಸರಳ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವರನಿಗೆ 5 ಸಾವಿರ ಹಾಗೂ ವಧುವಿಗೆ 10 ಸಾವಿರ ಸೇರಿದಂತೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು ಹೀಗೆ ಒಟ್ಟು 55 ಸಾವಿರ ರೂ. ಗಳನ್ನ ದೇವಾಲಯದ ವತಿಯಿಂದ ಭರಿಸಲಾಗಿದೆ. ಹಾಗೂ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ವಧು-ವರರು ಮತ್ತು ಅವರ ಬಂಧುಗಳಿಗೆ ಊಟೋಪಚಾರ ವ್ಯವಸ್ಥೆಯನ್ನು ಸಹ ದೇವಾಲಯ ವತಿಯಿಂದ ಮಾಡಲಾಗಿತ್ತು ಎಂದು ತಿಳಿಸಿದರು

ಈ ವೇಳೆ ದೇವಾಲಯದ ಮುಜರಾಯಿ ತಹಶೀಲ್ದಾರ್ ಜೆ.ಜೆ.ಹೇಮಾವತಿ, ನಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
