ಸಿಪಿಐ(ಎಂ) ಪಕ್ಷದ ಮುಖಂಡರಿಂದ ಸುದ್ದಿಗೋಷ್ಠಿ : ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಅಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ

Spread the love

ದೊಡ್ಡಬಳ್ಳಾಪುರ : ಕಾಮಗಾರಿ ಮುಗಿದು 2 ವರ್ಷ ಪೂರೈಸಿರುವ ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೀಘ್ರ ಉದ್ಘಾಟನೆ ಮಾಡಲು ಮತ್ತು ಕಾರ್ಮಿಕರ ಇ.ಎಸ್.ಐ/ಪಿಎಫ್‌ಗಳ ವೇತನ ಮಿತಿ ತೆಗೆಯಲು ಆಗ್ರಹಿಸಿ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರು ನವೆಂಬರ್ 19ರಂದು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಸಿಪಿಐ(ಎಂ)ಪಕ್ಷದ ಜಿಲ್ಲಾ ಕಾರ್ಯದರ್ಶಿ ನರಸಿಂಹಮೂರ್ತಿ ತಿಳಿಸಿದರು.

 

ತಾಲ್ಲೂಕಿನ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಕಚೇರಿಯಲ್ಲಿ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು

ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಆರಹಳ್ಳಿ ಗುಡ್ಡದಹಳ್ಳಿ ಅಪೇರಲ್ ಪಾರ್ಕ್ ಎರಡನೇ ಹಂತದಲ್ಲಿ 100 ಹಾಸಿಗೆಗಳ ಸಾಮರ್ಥ್ಯವಿರುವ ಮಲ್ಟಿ ಸ್ಪೆಷಾಲಿಟಿ ಸುಸಜ್ಜಿತ ಇ.ಎಸ್.ಐ. ಆಸ್ಪತ್ರೆಯು ಸುಮಾರು 85 ಕೋಟಿ ಯೋಜನೆ ವೆಚ್ಚದಲ್ಲಿ (ಸಲಹಾ ವೆಚ್ಚ ಮತ್ತು ಇತರೆ ಖರ್ಚುಗಳನ್ನು ಹೊರತುಪಡಿಸಿ) ನಿರ್ಮಾಣವಾಗಿದೆ. ಇ.ಎಸ್.ಐ. ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಗಣ್ಯರು ತಮ್ಮ ಭಾಷಣಗಳಲ್ಲಿ ಆಸ್ಪತ್ರೆ 2 ವರ್ಷಗಳಲ್ಲಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದರು. ಆದರೆ 11 ವರ್ಷಗಳು ಕಳೆದರೂ ಸಹ ಉದ್ಘಾಟನೆಯಾಗಿಲ್ಲ ಎಂಬುದು ವಿಷಾದನೀಯ, ಇ.ಎಸ್.ಐ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೂಡಲೇ ಉದ್ಘಾಟನೆ ಮಾಡಿ, ಕಾರ್ಮಿಕರಿಗೆ ಉತ್ತಮವಾದ ಆರೋಗ್ಯ ಸೇವೆ ಒದಗಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

 

 

ಮುಖಂಡರಾದ ಪಿ ಎ ವೆಂಕಟೇಶ್ ಮಾತನಾಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾರ್ಮಿಕರು ಅನಾರೋಗ್ಯದ ಸಂದರ್ಭಗಳಲ್ಲಿ ಬೆಂಗಳೂರು ನಗರಕ್ಕೆ ಅಲೆಯುವಂತಾಗಿದೆ. ಈ ಆಸ್ಪತ್ರೆ ನಿರ್ಮಾಣಕ್ಕೆ ಬಳಸಿರುವ ಹಣ ಕಾರ್ಮಿಕರ ಸಂಬಳದಲ್ಲಿ, ಪ್ರತಿ ತಿಂಗಳು ಕಡಿತ ಮಾಡುವ ಹಣ, ಸರ್ಕಾರ ಇದಕ್ಕಾಗಿ ಬಿಡಿಗಾಸು ಸಹ ವೆಚ್ಚ ಮಾಡುವುದಿಲ್ಲ. ಆಸ್ಪತ್ರೆ ನಿರ್ಮಾಣ ಕಾರ್ಯವು ಮುಗಿದು ಎರಡು ವರ್ಷ ಕಳೆದರೂ ಸಹ ಇನ್ನೂ ಉದ್ಘಾಟನೆಯಾಗಿಲ್ಲ ಎಂದರು.

ಸರ್ಕಾರ ರೂಪಿಸಿರುವ ನೂತನ ಕಾಯ್ದೆಯಲ್ಲಿ ಕಾರ್ಮಿಕರ ವೇತನ 21000 ರೂ. ದಾಟಿದರೆ ಇ ಎಸ್ ಐ ಸೌಲಭ್ಯದಿಂದ ವಂಚಿತರಾಗುತ್ತಾರೆ, ಈ ಬೆಲೆ ಏರಿಕೆಯ ಸಂದರ್ಭದಲ್ಲಿ ಆರೋಗ್ಯದ ವೆಚ್ಚ ದುಬಾರಿಯಾಗಿದೆ. ಆದ್ದರಿಂದ ಕಾರ್ಮಿಕರ ವೇತನದ ಮಿತಿಯನ್ನು ತೆಗೆಯಬೇಕು ಎಲ್ಲಾ ಕಾರ್ಮಿಕರಿಗೂ ಉತ್ತಮವಾದ ಆರೋಗ್ಯಸೇವೆ ಸಿಗಬೇಕು ಎಂದರು.

 

ಪಕ್ಷದ ಮುಖಂಡರಾದ ಪ್ರಭಾ ಬೆಳವಂಗಲ ಮಾತನಾಡಿ ಜಿಲ್ಲೆಯಲ್ಲಿ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ, ಕೃಷಿ ಭೂಮಿಯನ್ನು ರೈತರಿಗೆ ಉಳಿಸುವ ನಿಟ್ಟಿನಲ್ಲಿ ಹಾಗೂ ವಸತಿಹೀನರಿಗೆ ವಾಸಯೋಗ್ಯ ಖಾಯಂ ಮನೆಗಳನ್ನು ಕಟ್ಟಿಸಿಕೊಡಲು ಒತ್ತಾಯಿಸಿ ತಾಲೂಕಿನ ಏಸಿ ಕಚೇರಿ ಮುಂಭಾಗ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ . ಸಿಪಿಐ(ಎಂ) ಪಕ್ಷವು ಸದಾ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರಿಗೆ, ಅಂಗನವಾಡಿ ನೌಕರರಿಗೆ, ಆಟೋ ಚಾಲಕರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಕಟ್ಟಡ ಕಾರ್ಮಿಕರಿಗೆ, ನೇಕಾರರಿಗೆ ಸೇರಿದಂತೆ ಇನ್ನೂ ಮುಂತಾದ ವಿಭಾಗಗಳಲ್ಲಿ ದುಡಿಯುವ ಕಾರ್ಮಿಕರ ಧ್ವನಿಯಾಗಿ ಶ್ರಮಿಸುತ್ತದೆ ಎಂದರು.

 

 

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಆರ್. ಚಂದ್ರ ತೇಜಸ್ವಿ, ಎಸ್. ರುದ್ರರಾಧ್ಯ, ಪ್ರಭಾ ಬೆಳವಂಗಲ, ವೆಂಕಟರಾಜು, ಪಿ ಎ ವೆಂಕಟೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *