ರೈತರ ಶಕ್ತಿವರ್ಧನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಕೀರ್ತಿ ಅಪ್ಪಯ್ಯಣ್ಣ ಅವರದ್ದು – ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ

Spread the love

ದೊಡ್ಡಬಳ್ಳಾಪುರ: ದಿವಂಗತ ಅಪ್ಪಯ್ಯಣ್ಣ ಅವರ ಸವಿ ನೆನಪಿಗಾಗಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ತಾಲೂಕಿನ ಹಾಡೋನಹಳ್ಳಿ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ದಿವಂಗತ ಅಪ್ಪಯ್ಯಣ್ಣ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತದ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ಮಾತನಾಡಿದರು. ಅಪ್ಪಯ್ಯಣ್ಣ ಅವರ ಜೀವನ ಶೈಲಿ ಹಾಗೂ ಸೇವಾ ಮನೋಭಾವ ಇಂದಿನ ರಾಜಕೀಯಕ್ಕೆ ಮಾದರಿಯಾಗಬೇಕಾದದ್ದು ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ನ್ಯಾಯದ ಪರವಾಗಿ ರಾಜಕೀಯ ಹೋರಾಟ ನಡೆಸಿ, ಸಹಕಾರ ಹಾಗೂ ಸಾರ್ವಜನಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ದಿವಂಗತ ಹಾಡೋನಹಳ್ಳಿ ಹೆಚ್. ಅಪ್ಪಯ್ಯಣ್ಣ ಅವರ ನಿಧನವು ನನ್ನಂತಹ ಅವರ ಅಪಾರ ಅಭಿಮಾನಿ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಒಂದು ವರ್ಷದ ಹಿಂದೆ ಅವರ ನಿಧನದ ಸುದ್ದಿ ತಿಳಿದಾಗ ನಂಬಲಾಗದೆ ಹೋಯಿತು. ಇದು ತಪ್ಪು ಮಾಹಿತಿ ಇರಬಹುದೆಂದು ಭಾವಿಸಿದ್ದೆ. ಸದಾ ಚುರುಕಾಗಿ ಸಮಾಜಸೇವೆಯಲ್ಲಿ ತೊಡಗಿದ್ದ, ಉತ್ತಮ ಆರೋಗ್ಯ ಹೊಂದಿದ್ದ ವ್ಯಕ್ತಿಯ ಅಕಾಲಿಕ ನಿಧನ ಅತೀವ ಅನಿರೀಕ್ಷಿತವಾಗಿತ್ತು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

 

ನಮ್ಮ ಒಡನಾಟ ತಂದೆ–ಮಗನ ಸಂಬಂಧದಂತಿತ್ತು. ಸಣ್ಣ ಹಳ್ಳಿಯ ರೈತನ ಮಗನಾಗಿ ಜನಿಸಿ, ತಾಲೂಕು ಮಟ್ಟದ ನಾಯಕನಾಗಿ ಬೆಳೆದ ಅವರ ಜೀವನ ಪಯಣ ಸುಲಭವಾಗಿರಲಿಲ್ಲ. ರೈತರ ಶಕ್ತಿವರ್ಧನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ ಕೀರ್ತಿ ಅವರದ್ದು. ಸಹಕಾರ ಕ್ಷೇತ್ರದಲ್ಲಿ ವಿಶೇಷವಾಗಿ ರೈತ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಅವರು ಸಲ್ಲಿಸಿದ ಪ್ರಾಮಾಣಿಕ ಸೇವೆಯೇ ಅವರ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ನೂರಾರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅರೋಗ್ಯ ತಪಾಸಣೆ ಮಾಡಿಸಿಕೊಂಡರು. ರಕ್ತದಾನ ಶಿಬಿರಕ್ಕೂ ಉತ್ತಮ ಸ್ಪಂದನೆ ದೊರೆಯಿತು ಈ ವೇಳೆ ಎಚ್.ಅಪ್ಪಯ್ಯಣ್ಣನವರ ಅಭಿಮಾನಿಗಳಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು ಹಾಗೂ

ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಅಲ್ಲದೆ ವೃದ್ಧರಿಗೆ ಊರುಗೋಲು ಹಾಗೂ ಕಂಬಳಿ, ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಆಂಜಿನಪ್ಪ, ಡಾ. ವಿಜಯಕುಮಾರ್, ಅಪ್ಪಯ್ಯಣ್ಣನವರ ಪುತ್ರ ನಾಗರಾಜು, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ. ಮುನೇಗೌಡ, ಮಾಜಿ ಎಂಎಲ್‌ಸಿ ರಮೇಶ್ ಗೌಡ, ಮಾಜಿ ಶಾಸಕರಾದ ಗಂಟಿಗಾನಹಳ್ಳಿ ಕೃಷ್ಣಪ್ಪ, ಚಂದ್ರಣ್ಣ, ಹಿರಿಯ ಬಿಜೆಪಿ ಮುಖಂಡ ಹನುಮಂತರಾಯಪ್ಪ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಟಿಎಪಿಸಿಎಂಎಸ್ ಸದಸ್ಯ ಪುರೋಷೋತ್ತಮ, ಜೆಡಿಎಸ್ ಮುಖಂಡರಾದ ಹರೀಶ್ ಗೌಡ, ಹುಸ್ಕೂರು ಆನಂದ್, ಜಗನ್ನಾಥ್, ಮುದ್ದಣ್ಣ, ಬಚ್ಚಳ್ಳಿ ನಾಗರಾಜು, ಗೌರೀಶ್, ಯುವ ಮುಖಂಡ ಉದಯ ಆರಾಧ್ಯ ಸೇರಿದಂತೆ ಹಲವರು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.