ದೊಡ್ಡಬಳ್ಳಾಪುರ : ನಗರದ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಲಯನ್ಸ್ ಕ್ಲಬ್ ಮತ್ತು ಲಯನ್ಸ್ ಚಾರಿಟಬಲ್ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕಲಾವಿದರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವದ ಎರಡನೇ ದಿನ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ಕಲಾವಿದರು ಕೃಷ್ಣಮೂರ್ತಿ ಎನ್ ತಾಳಿಕಟ್ಟಿ ರಚಿಸಿ ಮತ್ತು ನಿರ್ದೇಶನ ಮಾಡಿರುವ ಕಳ್ಳರ ಸಂತೆ ನಾಟಕವನ್ನು ಪ್ರದರ್ಶನ ಮಾಡಿದರು.
Ad
ಕಳ್ಳರ ಸಂತೆ ನಾಟಕದ ಕಥಾ ವಸ್ತು 15 ನೆಯ ಶತಮಾನದ ಕವಿ ವಿದ್ಯಾಪತಿ ರಚಿಸಿರುವ ಕಥೆಯಿಂದ ಪ್ರೇರಿತವಾಗಿದೆ. ಕಳ್ಳರ ಸಂತೆ ನಾಟಕ ಮನುಷ್ಯನ ಅನೀತಿಯ ನಡವಳಿಕೆಗಳನ್ನು ಕೆಲವು ಹಾಸ್ಯ ಸನ್ನಿವೇಶಗಳ ಮೂಲಕ ಸಾಂಕೇತಿಕವಾಗಿ ಪ್ರದರ್ಶನವಾಗಿದೆ. ನಾಟಕದ ಕಥಾ ವಸ್ತು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ. ಸಮಾಜದಲ್ಲಿ ಉಂಟಾಗುತ್ತಿರುವ ನೈತಿಕತೆಯ ಬರಗಾಲಕ್ಕೆ ಪರಿಹಾರ ಕಂಡುಕೊಳ್ಳುವಂತೆ ಪ್ರೇಕ್ಷಕರನ್ನು ಪ್ರಚೋದಿಸುತ್ತದೆ. ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ ಅವರನ್ನು ಚಿಂತನೆಗೆ ಒಳಪಡಿಸುವುದು ಕಳ್ಳರ ಸಂತೆ ನಾಟಕದ ಉದ್ದೇಶವಾಗಿದೆ. ಜೀವನ ಮೌಲ್ಯಗಳನ್ನು ಕಳೆದುಕೊಳ್ಳುವ ಬದಲಾಗಿ ಅವುಗಳನ್ನು ವೃದ್ದಿಸಿಕೊಳ್ಳುವ ಕಡೆಗೆ ಸಮಾಜದ ಎಲ್ಲರೂ ಸಾಗಬೇಕಾಗಿದೆ ಎನ್ನುವುದು ಕಳ್ಳರ ಸಂತೆ ನಾಟಕದ ಮುಖ್ಯ ಆಶಯವಾಗಿದೆ.
ಬರಗಾಲದಲ್ಲಿ ರಾಜ್ಯದ ಖಜಾನೆಗೆ ಖನ್ನ ಹಾಕುವ ಕಳ್ಳ ಚಾಣಾಕ್ಷತನದಿಂದ ತನ್ನ ಪ್ರಾಣ ಉಳಿಸಿಕೊಳ್ಳುವುದರ ಜೊತೆಗೆ ರಾಜನು ಒಳಗೊಂಡಂತೆ ರಾಜನ ಸುತ್ತಮುತ್ತಲೂ ಇರುವವರೆಲ್ಲಾ ಕಳ್ಳರು, ಸುಳ್ಳರು, ಮೋಸಗಾರರು ಎನ್ನುವುದನ್ನು ಕಳ್ಳನ ಚಾಣಾಕ್ಷತನದಿಂದ ಸಾಬೀತಾಗುತ್ತದೆ. ನಾಟಕದ ಕೊನೆಯಲ್ಲಿ ರೈತರೇ ಪ್ರಾಮಾಣಿಕರು, ನೀತಿವಂತರು ಬರಡಾಗಿರುವ ಮನಸ್ಸುಗಳಲ್ಲಿ ಮನುಷ್ಯತ್ವ ಮತ್ತು ನೈತಿಕತೆಯನ್ನು ಬಿತ್ತುವವರು ಎಂಬುದನ್ನು ಸಾಂಕೇತಿಸಲಾಗಿದೆ.
ಕಳ್ಳರ ಸಂತೆ ನಾಟಕಕ್ಕೆ ಆರ್.ಜಗದೀಶ್ ಸಂಗೀತ ಮತ್ತು ವಿನ್ಯಾಸ, ಸಂಗೀತ ಸಹಕಾರವನ್ನು ಎಚ್.ಎಸ್.ನಾಗರಾಜ್ ಮತ್ತು ಕೆ.ದಾಕ್ಷಾಯಣಿ, ತಬಲ ಸಾಥಿ ಶರಣ್ ಕುಮಾರ್ , ಸಂಗೀತ ನಿರ್ವಹಣೆ ಆರ್.ಚಂದ್ರಮ್ಮ, ಬಸವರಾಜ ತಮ್ಮಣ್ಣ ಪೂಜಾರಿ, ಪ್ರಶಾಂತ್, ಬೆಂಕಿನ ವಿನ್ಯಾಸ ರಾಜು ಬಿ ಲಕ್ಕಮುತ್ತೇನಹಳ್ಳಿ ಮತ್ತು ರಂಗ ನಿರ್ವಹಣೆಯನ್ನು ದಿನೇಶ್ ಯರನಾಳ ಮಾಡಿದರು.
ಕಳ್ಳರ ಸಂತೆ ನಾಟಕವನ್ನು ರಂಗದ ಮೇಲೆ ಅಭಿನಯಿಸಿದ ಕಲಾವಿದರುಗಳು ಬಸವರಾಜ ತಮ್ಮಣ್ಣ ಪೂಜಾರಿ, ವಿಶ್ವಾಸರೆಡ್ಡಿ, , ಪ್ರವೀಣ ಕೊಪ್ಪಳ, ಸುನೀಲ ಕಲುಬುರಗಿ, ಉದಯಕುಮಾರ್, ದಿನೇಶ್ ಯರನಾಳೆ, ಎನ್.ವಿಶ್ವಜ್ಯೋತಿ, ಪ್ರಶಾಂತ್, ಜಿ.ಯಲ್ಲಪ್ಪ, ಎಸ್.ಎಸ್.ಸುಹಾಸ್, ಬಿ.ಎಸ್.ರಾಜೇಶ್, ಜೆ.ಜನಾರ್ಧನ್. ಚಂದ್ರಕಲಾ, ನಾಗರತ್ನ, ದರ್ಶನ್.
