ಮಕ್ಕಳಿಗೆ ವಿದ್ಯಾಭ್ಯಾಸ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುವುದರಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವ ಜೊತೆಗೆ ಮಕ್ಕಳ ಪ್ರತಿಭೆ ಗುರುತಿಸಲು ಉತ್ತಮ ಅವಕಾಶ ಸಿಕ್ಕಂತಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.
ದೇವನಹಳ್ಳಿ ಟೌನ್ ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ/ಕಲೋತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಶಾಲೆಗಳಲ್ಲಿ ಪ್ರತಿಭಾ ಕಾರಂಜಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಉತ್ತಮ ಕೆಲಸ ಮಾಡುತ್ತಿದೆ. ವಿದ್ಯಾಬ್ಯಾಸ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಭಾಷಣ ಸ್ಪರ್ಧೆ, ರಸಪ್ರಶ್ನೆ, ಜಾನಪದ ಗೀತೆ, ಭಾವಗೀತೆ, ಭರತನಾಟ್ಯ, ಏಕಪಾತ್ರಾಭಿನಯ, ನಾಟಕ ಮುಂತಾದ ಕಲೆ, ಪ್ರತಿಭೆಯನ್ನು ಮಕ್ಕಳು ತೋರಿಸಲು ಉತ್ತಮ ವೇದಿಕೆಯಾಗಿದೆ ಎಂದರು.
ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಆಯ್ಕೆ ಆಗಬೇಕು. ಜಿಲ್ಲೆಗೆ, ರಾಜ್ಯಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು. ಮಕ್ಕಳನ್ನು ಪೋಷಿಸಿ ಬೆಳೆಸುವುದರಲ್ಲಿ ಪೋಷಕರ ಪಾತ್ರ ಎಷ್ಟು ಮುಖ್ಯವೋ ಹಾಗೆಯೇ ಶಿಕ್ಷಕರ ಪಾತ್ರ ಅಷ್ಟೇ ಮುಖ್ಯ. ವಿದ್ಯಾಬ್ಯಾಸ ಜೊತೆಗೆ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವುದು, ಭವ್ಯ ಭಾರತ ನಿರ್ಮಾಣಕ್ಕೆ ಮಕ್ಕಳನ್ನು ಬೆಳೆಸುವುದು ಪೋಷಕರ, ಶಿಕ್ಷಕರ ಮೇಲಿದೆ ಎಂದರು.
*ಮಾದರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಕ್ರಮ*
ಈಗಿನ ಸರ್ಕಾರಿ ಪ್ರೌಢಶಾಲೆಯು ಸುಮಾರು 75 ವರ್ಷದ ಹಳೆಯ ಕಟ್ಟಡವಾಗಿದೆ. ಇನ್ಫೋಸಿಸ್ ಸಂಸ್ಥೆಯು ಸಿಎಸ್ಆರ್ ಅನುದಾನದಡಿ 25 ಕೊಠಡಿ ನಿರ್ಮಿಸಲು ಉದ್ದೇಶಿಸಿದ್ದಾರೆ. ಸರ್ಕಾರಿ ಹಾಗೂ ಸಿಎಸ್ಆರ್ ಅನುದಾನದಡಿ ಸುಸಜ್ಜಿತ ಮಾದರಿ ಸರ್ಕಾರಿ ಶಾಲೆ ನಿರ್ಮಿಸಲಾಗುವುದು. ಅಧಿಕಾರಿಗಳು ಮಾದರಿ ಕಟ್ಟಡದ ರೂಪುರೇಷೆ ಸಿದ್ದಪಡಿಸಿ ವರದಿ ನೀಡಿ ಆದಷ್ಟು ಬೇಗ ಕೆಲಸ ಶುರು ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬೈಲಾಂಜಿನಪ್ಪ, ತಹಶೀಲ್ದಾರ್ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














Leave a Reply