ಗುಡಿಬಂಡೆ: ಕರ್ನಾಟಕದಲ್ಲಿ ಪ್ರಾದೇಶಿಕ ಭಾಷೆಗಳಲ್ಲದೇ ಹೊರ ರಾಜ್ಯದವರೂ ಇದ್ದಾರೆ. ಅವರನ್ನೂ ನಮ್ಮವರೆಂದು ಭಾವಿಸಿ ಒಪ್ಪಿಕೊಳ್ಳುವ ವಿಶಾಲ ಮನಸ್ಸು ಕನ್ನಡಿಗರಲ್ಲಿದೆ. ಆದರೆ, ಈ ವೈಶಾಲ್ಯದ ಮಧ್ಯೆ ನಮ್ಮ ಭಾಷೆ ಯನ್ನು ಯಾವುದೇ ಕಾರಣಕ್ಕೂ ಮರೆಯ ಬಾರದು ಎಂದುಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಕುಮಾರಿ ತಿಳಿಸಿದರು.
Ad
ಪಟ್ಟಣದ ನ್ಯೂ ವಿಷನ್ ಆಂಗ್ಲ ಶಾಲೆಯಲ್ಲಿ ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿದ್ದ 112ನೇ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಭಾಷೆಗಳನ್ನು ಕಲಿಯುವುದರಲ್ಲಿಯಾವುದೇ ತಪ್ಪಿಲ್ಲ. ಆದರೆ, ಮಾತೃ ಭಾಷೆ ಯನ್ನು ಮರೆಯಬಾರದು. ಕನ್ನಡ ಮಾತನಾಡು ವುದರಲ್ಲಿರುವ ಆಪ್ತತೆ ಇನ್ನೊಂದರಲ್ಲಿಲ್ಲ. ಹೀಗಾಗಿ, ಮಮ್ಮಿ, ಡ್ಯಾಡಿ ಸಂಸ್ಕೃತಿಯನ್ನು ಬಿಟ್ಟು ಅಮ್ಮ, ಅಪ್ಪ ಎಂದು ಕರೆಯುವುದಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
Ad
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿಗೆ 112 ವರ್ಷಗಳ ಸಂಭ್ರಮ. ಕನ್ನಡ ನಾಡು, ನುಡಿ, ಸಂಸ್ಕೃತಿ ರಕ್ಷಣೆಗಾಗಿ 1915ರಲ್ಲಿ ಆಗಿನ ಮೈಸೂರು ಸಂಸ್ಥಾನದ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್. ಎಂ. ವಿಶ್ವೇಶ್ವರಯ್ಯ ರವರು ವಿಶೇಷ ಕಾಳಜಿ ವಹಿಸಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ ಸಂಸ್ಥಾಪನೆ ಗೊಳ್ಳಲು ಪ್ರಮುಖ ಕಾರಣರಾಗಿದ್ದರು. ಆಗಿನಿಂದ ಇಂದಿನವರೆಗೂ ಅನೇಕ ಮಹನೀಯರು ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿ ಕನ್ನಡ ನಾಡು, ನುಡಿ ಬೆಳವಣಿಗೆಗೆ ನೆರವಾಗಿದ್ದಾರೆ ಎಂದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸ.ನ. ನಾಗೇಂದ್ರ ಗುಡಿಬಂಡೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಕೆ.ಎಂ. ನಯಾಜ್ ಅಹ್ಮದ್ ಮಾತನಾಡಿ, ಇತ್ತೀಚೆಗೆ ಕನ್ನಡ ಭಾಷೆ ಉಳಿಸುವುದೇ ದೊಡ್ಡ ಸಾಹಸವಾಗಿದೆ. ಒಬ್ಬ ವ್ಯಕ್ತಿ ಪರಿಪೂರ್ಣತೆಯನ್ನು ಪಡೆಯಬೇಕಾದರೆ ಮಾತೃಭಾಷೆಯಿಂದ ಮಾತ್ರ ಸಾಧ್ಯ. ಮಾತೃಭಾಷೆಯನ್ನು ಕಡೆಗಣಿಸಿದ ವ್ಯಕ್ತಿ ಹೆತ್ತ ತಾಯಿಯನ್ನು ಕಡೆಗಣಿಸಿದಷ್ಟೇ ಸತ್ಯ. ಕನ್ನಡಿಗನಾಗಿ ಹುಟ್ಟಿ ಕೊನೆಗೆ ಮಣ್ಣಲ್ಲಿ ಮಣ್ಣಾಗುವ ವರೆಗೆ ಕನ್ನಡಿಗನಾಗಿ ಬದುಕಿ ಬಾಳುವುದು ಮನುಷ್ಯತ್ವ. ಪರಭಾಷೆ ನಮಗೆ ಎಷ್ಟು ಅವಶ್ಯವೋ ಅಷ್ಟನ್ನು ಮಾತ್ರ ಬಳಸಬೇಕು ಅದು ಅತಿಯಾಗಬಾರದು. ಕನ್ನಡಿಗರು ಯಾವುದೇ ಮುಜುಗರಕ್ಕೆ ಒಳಪಡದೆ ಪರಭಾಷಿಗರನ್ನು ಕನ್ನಡದಲ್ಲಿ ಮಾತನಾಡಿಸಬೇಕು. ರಾಜ್ಯ ಸರ್ಕಾರ ಸಹ ಕನ್ನಡ ಭಾಷೆ ಉಳಿವಿಗೆ ದೃಢ ನಿರ್ಧಾರಗಳನ್ನು ತೆಗೆಕೊಳ್ಳಬೇಕೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಮಂಜುನಾಥ ಮಾತನಾಡಿ, ಇತ್ತೀಚೆಗೆ ಯುವಜನತೆ ಪುಸ್ತಕ ಹಾಗೂ ದಿನ ಪತ್ರಿಕೆಗಳನ್ನು ಓದುವುದನ್ನೇ ಮರೆತಿದ್ದಾರೆ. ಮೊಬೈಲ್ ಗಳ ಸಾಹೂ ಸಾಮಾಜಿಕ ಜಾಲತಾಣಗಳ ವ್ಯಾಮೋಹದಲ್ಲಿ ಮುಳುಗಿದ್ದಾರೆ. ಇದರಿಂದ ಹೊರಬಂದು ಕನ್ನಡ ಭಾಷೆ ಉಳಿವಿಗೆ ಸಹಕಾರ ನೀಡಬೇಕು, ಕನ್ನಡ ಪುಸ್ತಕಗಳನ್ನು ಪೇಪರ್ ಗಳನ್ನು ಓದುವ ಮೂಲಕ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಶ್ರೇಷ್ಠ, ದ್ವಿತೀಯ ಸ್ಥಾನ ಸನ್ನತಿ ಹಾಗೂ ತೃತಿಯ ಸ್ಥಾನ ಪಡೆದ ಪಲ್ಲವಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಕನ್ನಡ ಸಾಹಿತ್ಯ ಪರಿಷತ್ತಿನ 7ನೇ ಸಮ್ಮೇಳನಾಧ್ಯಕ್ಷ ಬಿ. ಅಮೀರ್ ಜಾನ್, ನ್ಯೂ ವಿಷನ್ ಶಾಲೆಯ ಮುಖ್ಯಶಿಕ್ಷಕಿ ಡಿ.ಎಲ್. ಪರಿಮಳ, ಪತ್ರಕರ್ತರ ಸಂಘದ ಅಧ್ಯಕ್ಷ ಎಲ್.ಎನ್. ಈಶ್ವರಪ್ಪ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ಯಾದವ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿ. ಶ್ರೀರಾಮಪ್ಪ, ಸಹ ಕಾರ್ಯದರ್ಶಿ ಗುಂಪುಮರದ ಆನಂದ್, ಕಾರ್ಯಕಾರಿ ಸಮಿತಿಯ ಜೀವಿಕ ನಾರಾಯಣಸ್ವಾಮಿ, ಕಡೇಹಳ್ಳಿ ಕದಿರಪ್ಪ,ಆರ್. ರಾಜಪ್ಪ, ಜಿ.ವಿ. ಗಂಗಪ್ಪ, ರಾಮಾಂಜಿನೆಯ್ಯ, ಯಳವರ್ ಸೇರಿದಂತೆ ಇತರರು ಭಾಗವಹಿಸಿದ್ದರು.
