ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ವಿಶ್ವನಾಥಪುರ ಗ್ರಾಮ ಪಂಚಾಯತಿಯ ಸಂಯುಕ್ತ ಆಶ್ರಯದಲ್ಲಿ ದೇವನಹಳ್ಳಿ ತಾಲ್ಲೂಕು ವಿಶ್ವನಾಥಪುರ ಗ್ರಾಮದಲ್ಲಿ “ವರದಕ್ಷಿಣೆ – ಒಂದು ಸಾಮಾಜಿಕ ಪಿಡುಗು” ಎಂಬ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಗದೀಶ್ ಎನ್ ಎಂ. ಮಾತನಾಡಿ, ವರದಕ್ಷಿಣೆ ಎಂಬುದು ಸಮಾಜಕ್ಕೆ ಪಿಡುಗಾಗಿದ್ದು, ಇದರ ಪರಿಣಾಮವಾಗಿ ಅನೇಕ ಮಹಿಳೆಯರ ಜೀವನ ಸಂಕಷ್ಟಕ್ಕೆ ಸಿಲುಕುತ್ತಿದ್ದು ಮದುವೆಯ ಸಂದರ್ಭದಲ್ಲಿ ವಧುವಿನ ಕುಟುಂಬವು ವರ ಅಥವಾ ಅವರ ಕುಟುಂಬಕ್ಕೆ ಹಣ, ಆಸ್ತಿ, ಒಡವೆ ಅಥವಾ ಅಮೂಲ್ಯ ವಸ್ತುಗಳನ್ನು ನೀಡುವುದನ್ನು ವರದಕ್ಷಿಣೆ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು
ಭಾರತ ಸರ್ಕಾರವು ವರದಕ್ಷಿಣೆ ತಡೆಯುವ ಉದ್ದೇಶದಿಂದ 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ವರದಕ್ಷಿಣೆ ಕೇಳುವುದು, ನೀಡುವುದು ಅಥವಾ ಸ್ವೀಕರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಕಿರುಕುಳಗಳಿಗೆ ಐದು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ ಇಂತಹ ಪ್ರಕರಣವಿದ್ದರೆ ತಕ್ಷಣ 181 ಮಹಿಳಾ ಸಹಾಯವಾಣಿ ಕರೆ ಮಾಡಿ ಎಂದು ತಿಳಿಸಿದರು.
Ad
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಮುದ್ದಣ್ಣ ಮಾತನಾಡಿ, ವರದಕ್ಷಿಣೆ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಮತ್ತು ಬಾಲ್ಯ ವಿವಾಹದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಭಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾ ನಿರೂಪಣಾಧಿಕಾರಿ ಶ್ರೀ ರಮೇಶ್ ಮಾತನಾಡಿ, 1961ರಲ್ಲಿ ಜಾರಿಗೆ ಬಂದ ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಇಂದಿಗೂ ಅರಿವು ಮೂಡಿಸುವ ಅಗತ್ಯ ಇರುವುದೇ ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಜೊತೆಗೆ ವರದಕ್ಷಿಣೆ, ಬಾಲ್ಯ ವಿವಾಹ, ಮರ್ಯಾದ ಹತ್ಯೆ, ಲಿಂಗಾನುಪಾತ ಮತ್ತು ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವದ ಕುರಿತು ಬೆಳಕು ಚೆಲ್ಲಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥಪುರ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಶ್ರೀಮತಿ ಲಕ್ಷ್ಮಿದೇವಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧೀಕ್ಷಕರು ಶ್ರೀ ವಿನೋದ್ ರಾಜ್ ಡಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೊಡ್ಡಬಳ್ಳಾಪುರ, ಹಿರಿಯ ಮೇಲ್ವಿಚಾರಕಿ ಹೇಮಾವತಿ ಬಾಯಿ, ನೆಲಮಂಗಲ ಶ್ರೀಮತಿ ಮುನಿ ಲಕ್ಷ್ಮಮ್ಮ ಮೇಲ್ವಿಚಾರಕಿ ವಿಶ್ವನಾಥಪುರ ಹಾಗೂ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು ಉಪಸ್ಥಿತರಿದ್ದರು.
