ದೊಡ್ಡಬಳ್ಳಾಪುರ : ಹಾಲು ಉತ್ಪಾದಕ ರೈತರು ಮಕ್ಕಳ ವಿದೇಶ ವ್ಯಾಸಂಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದರಾಗುವ ವಿದ್ಯಾರ್ಥಿಗಳಿಗೆ ಬಮುಲ್ ಟ್ರಸ್ಟ್ ನಿಂದ ಪ್ರತಿವರ್ಷ 20 ಕೋಟಿ ರೂ. ವಿನಿಯೋಗ ಮಾಡಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಹೇಳಿದರು.
ನಗರದ ಒಕ್ಕಲಿಗರ ಭವನದಲ್ಲಿ ಬಮೂಲ್ ವತಿಯಿಂದ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಬಮುಲ್ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಉದ್ಯೋಗವನ್ನು ನೀಡುವ ನಿಟ್ಟಿನಲ್ಲಿ ಶೇ.30 ರಷ್ಟು ಮೀಸಲಾತಿಯನ್ನು ಜಾರಿಗೆ ಮಾಡುವ ತೀರ್ಮಾನವನ್ನು ಆಡಳಿತ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ನಿಂದ ಮಿನಿಡೇರಿಗೆ 15 ಲಕ್ಷ, ಎರಡು ಹಸುಗಳಿಗೆ 1.80 ಲಕ್ಷ ರೂ.ಗಳನ್ನು ಶೇ.3 ರಷ್ಡು ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿ ಮಾಡಲಾಗಿದೆ. ಹಸುಗಳು ಸಾವನ್ನಪ್ಪಿದ್ದಾಗ ರೈತರಿಗೆ ವಿಮೆ ಹಣ ನೀಡಲು 6 ತಿಂಗಳು ಸಮಯವಾಗುತ್ತಿತ್ತು. ಈ ಸಮಯವನ್ನ ಕಡಿಮೆ ಮಾಡಲು ಬಮೂಲ್ ವತಿಯಿಂದಲೇ ವಿಮೆ ಯೋಜನೆ ಜಾರಿ ಮಾಡಿ ಕೇವಲ 15 ದಿನಗಳಲ್ಲಿ ಪರಿಹಾರ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.
Ad
ಡಿ.ಕೆ ಸುರೇಶ್ ರಾಜ್ಯಸಭೆಗೆ ಯತ್ನ ವಿಚಾರಕ್ಕೆ “ನಾನು ಅದರ ಆಕಾಂಕ್ಷಿ ಅಲ್ಲ- ನಾನು ಅಲ್ಲಿಗೆ ಹೋಗೋದು ಇಲ್ಲ” ಸ್ಪಷ್ಟನೆ ನೀಡಿದರು. ಡಿಸಿಎಂ ಡಿ.ಕೆ ಶಿವಕುಮಾರ್ ಸಿಎಂ ಆಗುವ ಪ್ರಶ್ನೆಗೆ ಅವರು ನಗುಮುಖದಲ್ಲಿ “ಕಾದು ನೋಡೋಣ ಎಂದರು.
ತಮಿಳುನಾಡು ಸರ್ಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆ ಸುರೇಶ್ ರಾಜ್ಯಪಾಲರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತಿದೆ. ಕೇಂದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವಂತಿದೆ. ಹೆಚ್ಚು ಸ್ಥಾನ ಗಳಿಸಿದ ಪಕ್ಷಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಸಂವಿಧಾನಾತ್ಮಕ ಕ್ರಮ. ರಾಜ್ಯಪಾಲರು ಸಂವಿಧಾನವನ್ನು ಕಾಪಾಡಬೇಕು, ಆದರೆ ಅವರ ನಡೆ ಸಂವಿಧಾನಕ್ಕೆ ಅಪಮಾನವಾಗುತ್ತಿದೆ ಎಂದು ಟೀಕಿಸಿದರು.
ಬಮುಲ್ ನಿರ್ದೇಶಕ ಬಿಸಿ ಆನಂದ್ ಕುಮಾರ್ ಮಾತನಾಡಿ ತಂದೆ-ತಾಯಯಂದಿರಿಗೆ ಮೋಸ ಮಾಡದೆ ಮಕ್ಕಳು ಬದುಕಿದರೆ ಅದೇ ಅವರಿಗೆ ನೀಡುವ ದೊಡ್ಡ ಗೌರವ. ಬಮುಲ್ ನೇಮಕಾತಿಯಲ್ಲಿ ರೈತರ ಮಕ್ಕಳಿಗೆ ಶೇ.೩೦ ರಷ್ಟು ಮೀಸಲಾತಿಗೆ ಅವಕಾಶ ಮಾಡಿಕೊಡಲಾಗಿದೆ. ತಾಲ್ಲೂಕಿನಲ್ಲಿ ಮೀಸಲಿಟ್ಟಿರುವ ೧೫ ಎಕರೆ ಜಮೀನುನಲ್ಲಿ ಬಮುಲ್ ನ ಯಾವುದಾದರು ಒಂದು ಯೋಜನೆ ಜಾರಿ ಮಾಡಿ ಎಂದು ಡಿಕೆ ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿಬಿರ ಕಚೇರಿಯಲ್ಲಿ ಗುತ್ತಿಗೆನೌಕರರಾಗಿ ಕೆಲಸ ಮಾಡುತ್ತಿರುವವರಿಗೆ ಗೃಹಪಯೋಗಿ ಸಾಮಾನುಗಳನ್ನ ವಿತರಣೆ ಮಾಡಲಾಯಿತು.
ಈ ವೇಳೆ ಬಮೂಲ್ ನಿರ್ದೇಶಕರಾದ ಬಿಸಿ ಆನಂದ್ ಕುಮಾರ್, ಮುನಿರಾಜು, ಹರೀಶ್ ಕುಮಾರ್, ಸತೀಶ್, ಟಿಎಪಿಎಂಸಿಎಸ್ ಅಧ್ಯಕ್ಷ ಡಿ. ಸಿದ್ದರಾಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು, ಬೆಂಗಳೂರು ಸಹಕಾರ ಒಕ್ಕೂಟದ ನಿರ್ದೇಶಕ ಬಿಟಿ ಶ್ರೀನಿವಾಸಮೂರ್ತಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಗೋವಿಂದರಾಜು, ಟಿಎಪಿಎಂಸಿಎಸ್ ನಿರ್ದೇಶಕರಾದ ಕೆಂಪೇಗೌಡ, ವಿಶ್ವಾಸ್ ಗೌಡ ಮತ್ತಿತ್ತರರು ಇದ್ದರು.
